ಚಿತ್ರದುರ್ಗ: ಹಿಂದೂ ಒಂದರ್ಥದಲ್ಲಿ ಧರ್ಮವೇ ಅಲ್ಲ. ನಮ್ಮದು ಸ್ವತಂತ್ರ ಲಿಂಗಾಯತ ಧರ್ಮ. ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವೇ ಅಲ್ಲ ಎಂದು ಸಾಣೇಹಳ್ಳಿ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಜಿಲ್ಲೆಯ ಹೊಳಲ್ಕೆರೆಯ ಒಂಟಿಕಂಬದ ಮಠದಲ್ಲಿ ನಡೆದ ಮಲ್ಲಿಕಾರ್ಜುನ ಮುರುಘರಾಜೇಂದ್ರಶ್ರೀ ಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿರುವ ವೇದ, ಪುರಾಣಗಳು, ಶಾಸ್ತ್ರಗಳು, ಲಿಂಗಾಯತ ಧರ್ಮದ ಮೂಲಗಳಲ್ಲ. ಹಾಗಾಗಿ ಹಿಂದೂ ಧರ್ಮದ ಭಾಗ ಲಿಂಗಾಯತ ಧರ್ಮ ಎನ್ನುವುದು ಸರಿಯಲ್ಲ ಎಂದರು.
ಹಿಂದೂ ಎನ್ನುವುದು ಅನೈತಿಕ, ಅನಾಚಾರಗಳಿಂದ ಒಳಗೊಂಡಿದೆ. ಇಂಥ ಧರ್ಮವನ್ನು ಶರಣರು ನಿರಾಕರಿಸಿ ಜಾತ್ಯತೀತ ತತ್ವಗಳನ್ನು ಒಳಗೊಂಡ ಲಿಂಗಾಯತ ಧರ್ಮವನ್ನು ಒಪ್ಪಿಕೊಂಡಿದ್ದಾರೆ. ವಚನಗಳಲ್ಲಿ ಲಿಂಗಾಯತ ಧರ್ಮದ ಸಾರವನ್ನು ನಾಡಿಗೆ ಬಿತ್ತರಿಸಿ ಸಾಕ್ಷಾತ್ಕರಿಸಿದ್ದಾರೆ. ಹಾಗಾಗಿ ಯಾವತ್ತೂ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವೇ ಹೊರತು ಹಿಂದೂ ಧರ್ಮಕ್ಕೆ ಸಂಬಂಧಿಸಿಲ್ಲ’ ಎಂದು ಹೇಳಿದರು.
ಜೈನ, ಬೌದ್ಧ, ಲಿಂಗಾಯತ ಎಲ್ಲವೂ ಹಿಂದೂ ಧರ್ಮದ ಭಾಗ: ವಚನಾನಂದ ಶ್ರೀ
ಹರಿಹರ ಪಂಚಮಸಾಲಿ ಮಠದ ವಚನಾನಂದ ಶ್ರೀ ಮಾತನಾಡಿ, ಹಿಂದೂ ಎಂಬುದು ಸತ್ಯ ಸನಾತನ ಆಗಿರುವಂಥದ್ದು. ಹಿಂದೂ ಎಂಬ ಮಹಾಸಾಗರದ ನದಿಗಳು ನಾವು. ಜೈನ, ಬೌದ್ಧ, ಲಿಂಗಾಯತ ಎಲ್ಲವೂ ಹಿಂದೂ ಧರ್ಮದ ಭಾಗ. ಹಿಂದೂ ಅಲ್ಲ ಎಂಬುವರು ಹಿಂದೂ ಲಿಂಗಾಯತ ಎಂಬ ಮೀಸಲಾತಿ ಪಡೆಯುವುದು ಎಂದು ಹೇಳಿದ್ದಾರೆ.
ಎಲ್ಲರಿಗೂ ಅಧ್ಯಯನದ ಅವಶ್ಯಕತೆ ಇದೆ. ನಾವೆಲ್ಲಾ ಹಿಂದೂಗಳು, ಬೌದ್ಧ, ಸಿಕ್ಕ ಧರ್ಮೀಯರಂತೆ ಲಿಂಗಾಯತರು. ಕೇವಲ ವೈದಿಕರು ಹಿಂದೂಗಳಲ್ಲ, ಅವೈದಿಕರೂ ಇದ್ದಾರೆ. ಹಿಂದೂ ಎಂಬುದೊಂದು ಮಹಾಸಾಗರ. ದಾರ್ಶನಿಕರು ಆಯಾಕಾಲಕ್ಕೆ ವಿವಿಧ ವಿಚಾರ ಹೇಳಿದ್ದಾರೆ. ಸಾಂವಿಧಾನಿಕವಾಗಿ ಮೀಸಲಾತಿ ಪಡೆದುಕೊಳ್ಳುತ್ತಿದ್ದೇವೆ. ಹಿಂದೂ ಎಂದು ಹೇಳಿಕೊಂಡೇ ನಾವು ಮೀಸಲಾತಿ ಪಡೆಯುತ್ತಿದ್ದೇವೆ. ಹಿಂದೂಗಳಲ್ಲ ಎಂದರೆ ಮೀಸಲಾತಿ ಏಕೆ ಪಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದರು.