ಬೆಂಗಳೂರು: ಪದೇ ಪದೇ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಹೇಳಿಕೆ ನೀಡಿರುವುದಕ್ಕೆ ವೀರಶೈವ ಲಿಂಗಾಯತ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದು, ಸಿ. ಟಿ. ರವಿ ಚುನಾವಣೆ ಪ್ರಚಾರದಲ್ಲಿ ಕಂಡು ಬಂದರೆ ಮುತ್ತಿಗೆ ಹಾಕಬೇಕು. ಕಿತ್ತೋದ ಸಿ.ಟಿ ರವಿ ಎಂದು ಘೋಷಣೆ ಕೂಗಬೇಕು ಪತ್ರಿಕಾ ಪ್ರಕಟಣೆ ಮೂಲಕ ಕರೆ ಕೊಟ್ಟಿದೆ.
ಅಲ್ಲದೇ ಲಿಂಗಾಯತ ಸಮಾಜದೊಂದಿಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಒಂದು ವಾರದಲ್ಲಿ ನಿಮ್ಮ ಮನೆಗೆ ಬಂದು ಹೋರಾಟ ಮಾಡುತ್ತೇವೆ ಎಂದು ಸಿಟಿ ರವಿಗೆ ಎಚ್ಚರಿಕೆ ನೀಡಿದೆ.
”ಚುನಾವಣೆ ಪ್ರಚಾರದಲ್ಲಿ ಸಿ.ಟಿ. ರವಿ ಎಲ್ಲಿಯಾದರೂ ಕಂಡು ಬಂದರೆ ಮುತ್ತಿಗೆ ಹಾಕಬೇಕು. ‘ಕಿತ್ತೋದ ಸಿ.ಟಿ. ರವಿ’ ಎಂದು ಘೋಷಣೆ ಕೂಗಬೇಕು” ಎಂದು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕರೆಕೊಟ್ಟಿದೆ.
ಕೆಲದಿನಗಳಿಂದ ಸಿ.ಟಿ. ರವಿ ಅವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಹೇಳಿಕೆಗೆ ತಿರುಗೇಟು ನೀಡುತ್ತಿರುವುದು ವೀರಶೈವ ಲಿಂಗಾಯತ ಸಮುದಾಯದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಟಿಕೆಟ್ ನೀಡುವ ಬಗ್ಗೆ ಕುಟುಂಬದಲ್ಲಿ ತೀರ್ಮಾನವಾಗುವುದಿಲ್ಲ, ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ನಮ್ಮ ಪಕ್ಷದಲ್ಲಿ ಕಿಚನ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲ್ಲ. ನಾಯಕರ ಮಕ್ಕಳೆಂದ ಕಾರಣಕ್ಕೆ ಅವರಿಗೆ ಟಿಕೆಟ್ ಸಿಕ್ಕಲ್ಲ. ಈಗ ವಿಜಯೇಂದ್ರ ಬಗ್ಗೆ ಕೇಳಿದ್ದೀರಿ. ಅವರಿಗೆ ಟಿಕೆಟ್ ನೀಡುವ ನಿರ್ಧಾರವನ್ನು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ. ಸಮೀಕ್ಷೆಯ ಆಧಾರದ ಮೇಲೆ ಗೆಲ್ಲುವ ಮಾನದಂಡದ ಆಧರಿಸಿ ಟಿಕೆಟ್ ನೀಡುವ ಕುರಿತು ನಿರ್ಧರಿಸಲಾಗುತ್ತದೆ. ಆದರೆ ಕುಟುಂಬದಲ್ಲಿ ಸಮೀಕ್ಷೆ ನಡೆಯುವುದಿಲ್ಲ ಎಂದು ಸಿಟಿ ರವಿ ವಿಜಯಪುರದಲ್ಲಿ ಹೇಳಿದ್ದರು. ಸಿಟಿ ರವಿ ಅವರ ಈ ಹೇಳಿಕೆಗೆ ಯಡಿಯೂರಪ್ಪನವರ ಅಭಿಮಾನಿಗಳು ಹಾಗೂ ವೀರಶೈವ ಲಿಂಗಾಯತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ.