ಮಂಗಳೂರು: ಸಾವರ್ಕರ್ ಫೋಟೋವನ್ನು ತೆಗೆಸುವಂತೆ ಪ್ರಾಂಶುಪಾಲರಿಗೆ ದೂರು ನೀಡಿದ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಎಬಿವಿಪಿ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿ ಸಮಾನ ಮನಸ್ಕ ವಿದ್ಯಾರ್ಥಿ ಸಂಘಟನೆಯ ವತಿಯಿಂದ ಶುಕ್ರವಾರ ಸಂಜೆ ವಿವಿ ಕಾಲೇಜಿಗೆ ಮುತ್ತಿಗೆ ಹಾಕಲಾಯಿತು.
ಅಮಾಯಕ ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ ಎಬಿವಿಪಿ ಗೂಂಡಾಗಳ ಬಂಧನ ಮತ್ತು ಪ್ರಾಂಶುಪಾಲೆಯನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಸಮಾನ ಮನಸ್ಕ ವಿದ್ಯಾರ್ಥಿ ಸಂಘಟನೆಗಳು ವಿವಿ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿತು.
ಈ ವೇಳೆ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿ.ಎಫ್.ಐ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಕಳೆದ ಹಲವು ದಿನಗಳಿಂದ ವಿವಿ ಕಾಲೇಜಿನಲ್ಲಿ ಗೂಂಡಾಗಿರಿ ಪ್ರದರ್ಶಿಸುವ ಎಬಿವಿಪಿ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಅಸಂವಿಧಾನಿಕವಾಗಿ ನಡೆಯುತ್ತಿರುವ ಪ್ರಾಂಶುಪಾಲೆಯನ್ನು ಕರ್ತವ್ಯದಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದರು.
NSUI ದ.ಕ ಜಿಲ್ಲಾಧ್ಯಕ್ಷ ಸವಾದ್ ಸುಳ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದವರನ್ನು ಶೀಘ್ರದಲ್ಲೇ ಬಂಧಿಸದಿದ್ದರೆ ಕೊಣಾಜೆಯ ಮಂಗಳೂರು ವಿವಿಗೆ ಮುತ್ತಿಗೆ ಹಾಕುವುದಾಗಿ ಇಲಾಖೆಯನ್ನು ಎಚ್ಚರಿಸಿದ್ದಾರೆ.
ಯೂತ್ ಕಾಂಗ್ರೆಸ್ ರಾಜ್ಯ ಮುಖಂಡ ಸುಹೈಲ್ ಕಂದಕ್ ಅವರು ಪ್ರತಿಭಟನೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಬೆಂಬಲ ವ್ಯಕ್ತಪಡಿಸಿದರು.
ಪ್ರತಿಭಟನಾ ಸಭೆಯಲ್ಲಿ ಸಿ.ಎಫ್.ಐ ಮುಖಂಡ ಅಶ್ಫಾಕ್ ಬಂಟ್ವಾಳ, NSUI ಮುಖಂಡ ಶಾನ್ ಶಿರಿ, ಆದಿಲ್ ಅಮಿನ್, ಸಫ್ವಾನ್ ಉಪಸ್ಥಿತರಿದ್ದರು.