ಮುಂಬೈ : ಮೊಬೈಲ್ ನೆಟ್ ವರ್ಕ್ ಗಾಗಿ ಮರ ಏರಿದ್ದ ಬಾಲಕರ ಮೇಲೆ ಸಿಡಿಲು ಬಡಿದು, ಓರ್ವ ಸಾವಿಗೀಡಾಗಿ ಉಳಿದ ಮೂವರು ಗಾಯಗೊಂಡಿರುವ ಬಗ್ಗೆ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯಲ್ಲಿ ನಡೆದಿದೆ. ಸಿಡಿಲು ಬಡಿದು ಮರದಿಂದ ಕೆಳಗೆ ಬಿದ್ದಿರುವ ಇನ್ನುಳಿದ ಮೂವರ ಸ್ಥಿತಿ ಗಂಭೀರವಾಗಿದೆ.
ಜಾನುವಾರು ಮೇಯಿಸಲೆಂದು ಹೋಗಿದ್ದ ಬಾಲಕರು ಮೊಬೈಲ್ ಫೋನ್ ನೆಟ್ ವರ್ಕ್ ಸಿಗಲಿಲ್ಲ ಎಂದು ಮರವೊಂದಕ್ಕೇರಿದ್ದಾರೆ. ಆಗಲೇ ಗುಡುಗು ಸಹಿತ ಮಳೆ ಬರುತಿತ್ತು. ಆದರೆ, ಮರದಲ್ಲಿದ್ದ ಬಾಲಕರು ಗುಡುಗು ಮಿಂಚು ಲೆಕ್ಕಿಸದೆ ಮೊಬೈಲ್ ಫೋನ್ ಬಳಸಿದ್ದಾರೆ.
ಇದೇ ಸಮಯದಲ್ಲಿ ಸಿಡಿಲು ಬಡಿದು, ಓರ್ವ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಪಾಲ್ಘಾರ್ ಜಿಲ್ಲೆಯ ದಹನು ತಾಲೂಕಿನ ಮಂಕರ್ ಪಾಡ ಎಂಬಲ್ಲಿ ಈ ಘಟನೆ ನಡೆದಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತ ಬಾಲಕನನ್ನು 15 ವರ್ಷದ ರವೀಂದ್ರ ಕೋರ್ದಾ ಎಂದು ಗುರುತಿಸಲಾಗಿದೆ. ಗಾಯಗೊಂಡ ಬಾಲಕರೂ 14-16 ವರ್ಷದೊಳಗಿನವರಾಗಿದ್ದಾರೆ.