ಮಂಗಳೂರು: ದ.ಕ. ಜಿಲ್ಲಾಧಿಕಾರಿ ಕಛೇರಿಯ ಮೂರನೇ ಮಹಡಿಯ ಲಿಫ್ಟ್ನಲ್ಲಿ ಮಹಿಳೆಯೊಬ್ಬರು ಸಿಲುಕಿದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಜಿಲ್ಲಾಧಿಕಾರಿ ಕಛೇರಿಯ ಸಿಬ್ಬಂದಿ ವಾಣಿ (43) ಲಿಫ್ಟ್ ನಲ್ಲಿ ಸಿಲುಕಿದ ಮಹಿಳೆ ಎಂದು ತಿಳಿದುಬಂದಿದೆ.
ಬೆಳಗ್ಗೆ 8 ಗಂಟೆ ಸುಮಾರಿಗೆ ಮಹಿಳೆಯು ಲಿಫ್ಟ್ ಬಳಸುವಾಗ ದಿಢೀರನೇ ಸ್ಥಗಿತಗೊಂಡಿದೆ. ನಂತರ ವಿಷಯ ತಿಳಿದು ಅಗ್ನಿಶಾಮಕ ದಳದ ಪಾಂಡೇಶ್ವರ ಠಾಣೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಪ್ರೆಡ್ಡರ್ ಯಂತ್ರ ಬಳಸಿ ಲಿಫ್ಟ್ ನ ಬಾಗಿಲನ್ನು ಕತ್ತರಿಸಿದ್ದಾರೆ. 30 ನಿಮಿಷಗಳ ಕಾರ್ಯಾಚರಣೆ ನಂತರ ಲಿಫ್ಟ್ ನಲ್ಲಿ ಸಿಲುಕಿದ್ದ ಮಹಿಳೆಯನ್ನು ಯಶಸ್ವಿಯಾಗಿ ರಕ್ಷಿಸಲಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.