ಬೆಂಗಳೂರು: ಹಬ್ಬ ಹರಿದಿನಗಳ ಸಂಧರ್ಭವನ್ನು ಬಳಸಿಕೊಂಡು ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುವ ಖಾಸಗಿ ಬಸ್‌ಗಳ ಮಾಲಕರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಬಸ್ ಪರವಾನಗಿ ರದ್ದು ಮಾಡಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಹೆಚ್ಚಿನ ಜನರು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ಹೋಗಲು ಸಿದ್ದತೆ ನಡೆಸುತ್ತಿದ್ದಾರೆ. ಇಂತಹ ಸಂದರ್ಭಗಳನ್ನು ಬಳಸಿಕೊಂಡು ಖಾಸಗಿ ಬಸ್‌ಗಳಲ್ಲಿ ಪ್ರಯಾಣ ದರವನ್ನು ಏಕಾಏಕಿ ಏರಿಕೆ ಮಾಡಿ, ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿ ಮಾಡುವುದಕ್ಕೆ ಬಸ್ ಮಾಲಕರು ಮುಂದಾದಲ್ಲಿ ಅಂತಹವರ ವಿರುದ್ದ ಕ್ರಮ ಅನಿವಾರ್ಯ. ಇದಕ್ಕಾಗಿ ಟಾಸ್ಕ್ ಪೋರ್ಸ್ ರಚನೆ ಮಾಡಲಾಗುತ್ತದೆ. ಅಲ್ಲದೆ ಚೆಕ್‌ಪೋಸ್ಟ್‌ಗಳನ್ನು ಹೆಚ್ಚಿಸಿ ಬಸ್‌ಗಳಲ್ಲಿ ಪರಿಶೀಲನೆ ಕಾರ್ಯ ನಡೆಯಲಿದೆ ಎಂದರು.
ದೀಪಾವಳಿ ಸೇರಿದಂತೆ ಹಬ್ಬ ಹರಿದಿನಗಳಲ್ಲಿ ಸರ್ಕಾರಿಯಾಗಲೀ, ಖಾಸಗಿಯಾಗಲೀ ಯಾವುದೇ ಬಸ್‌ಗಳ ಟಿಕೆಟ್ ದರ ಏರಿಕೆ ಮಾಡುವಂತಿಲ್ಲ. ಯಥಾಸ್ಥಿತಿಯಲ್ಲೇ ದರ ಇರಬೇಕು. ಹೆಚ್ಚುವರಿ ವಸೂಲಿ ಮಾಡಿದರೆ ಅಂತಹವರ ಪರವಾನಗಿ ರದ್ದು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.