ಅನಾಥ ಶವಗಳ ಸಂಸ್ಕಾರ: ಮೈಸೂರಿನ ಅಯೂಬ್ ಅಹಮದ್‌ ​ಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಪ್ರಧಾನಿಗೆ ಪತ್ರ

Prasthutha|

ಮೈಸೂರು: ಸಾಮಾಜದಲ್ಲಿ ನಮ್ಮ ಮಧ್ಯೆ ಅದೆಷ್ಟೋ ಕಾಣದ ಕೈಗಳು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿವೆ. ಆ ಕೈಗಳು ಬೆಳಕಿಗೆ ಬಾರದೆ ಎಲೆ ಮರೆ ಕಾಯಿಯಂತೆ ಸೇವೆಯಲ್ಲೇ ನಿರತವಾಗಿರುತ್ತವೆ. ಅದರಂತೆ ಮೈಸೂರಿನ “ಬಾಡಿ ಮಿಯಾನ್​​” ಅಯೂಬ್ ಅಹಮದ್‌ ಸಾವಿರಾರು ಅನಾಥ ಶವಗಳ ಸಂಸ್ಕಾರ ಮಾಡುವ ಮೂಲಕ ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಶಾಸಕ ತನ್ವೀರ್ ಸೇಠ್ ಮತ್ತು ಸಂಸದ ಪ್ರತಾಪ್ ಸಿಂಹ ಪತ್ರ ಬರೆದಿದ್ದಾರೆ.

- Advertisement -

ಅಯೂಬ್ ಅಹಮದ್‌ ಅವರು ಕಳೆದ 22 ವರ್ಷಗಳಿಂದ ಈ ಕಾರ್ಯ ಮಾಡುತ್ತಿದ್ದು ಇದುವರೆಗೂ ತಮ್ಮದೆ ಖರ್ಚಿನಲ್ಲಿ 16 ಸಾವಿರ ಅನಾಥ ಶವಗಳ ಸಂಸ್ಕಾರ ಮಾಡಿದ್ದಾರೆ. ಇವರು ಮೈಸೂರು ಮಾತ್ರವಲ್ಲದೇ ಚಾಮರಾಜನಗರ ಸೇರಿದಂತೆ ಹಲವು ಭಾಗಗಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಯೂಬ್ ಅಹಮದ್‌ ಅವರು ಅನಾಥಶ್ರಮ ಮತ್ತು ಟೈಲರಿಂಗ್ ತರಬೇತಿ ಸಂಸ್ಥೆ ನಡೆಸುತ್ತಿದ್ದಾರೆ.

ಯಾರು ಈ ಬಾಡಿ ಮಿಯಾನ್​

- Advertisement -

ಅಯೂಬ್ ಅಹಮದ್‌ 22 ವರ್ಷಗಳ ಹಿಂದೆ ಗುಂಡ್ಲುಪೇಟೆಯಿಂದ ಮೈಸೂರಿಗೆ ಬಸ್​​​ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್ಸಿನಲ್ಲಿ ಹೋಗುತ್ತಿದ್ದಾಗ ರಸ್ತೆಯಲ್ಲಿ ಅನಾಥ ಶವವೊಂದನ್ನು ನೋಡಿದರು. ಎಂಟು ಗಂಟೆಗಳ ನಂತರ ಹಿಂದಿರುಗುವ ಪ್ರಯಾಣದಲ್ಲೂ ಶವ ಹಾಗೆ ಇತ್ತು. ಇದನ್ನು ಕಂಡು ಮರುಗಿದ ಅಯೂಬ್​ ಅಹಮದ್​ ಅಂದಿನಿಂದ ಅನಾಥ ಶವಗಳ ಸಂಸ್ಕಾರ ಮಾಡಲು ಪ್ರಾರಂಭಿಸಿದರು.

ಮೈಸೂರಿನ ಸುತ್ತಮುತ್ತಲಿನ ಊರುಗಳಿಂದ ಇವರಿಗೆ ಕರೆ ಮಾಡಿ ವಿಷಯ ತಿಳಿಸುತ್ತಾರೆ. ನಂತರ ಇವರು ಅಲ್ಲಿಂದ ಅನಾಥ ಶವಗಳನ್ನು ತಂದು ಕೆಆರ್ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಇಡುತ್ತಾರೆ. ಬಳಿಕ ತಮ್ಮ ಅಂಬಾಸಿಡರ್ ಕಾರನಲ್ಲಿ ತೆಗೆದುಕೊಂಡು ಹೋಗಿ ಅಂತಿಮ ವಿಧಿವಿಧಾನ ನೆರವೇರಿಸುತ್ತಾರೆ. ಅಲ್ಲದೇ ಕೊರೊನಾ ಸಮಯದಲ್ಲೂ ಅನೇಕ ಶವಗಳ ಸಂಸ್ಕಾರ ಮಾಡಿದ್ದಾರೆ.

ಇವರ ಈ ಸಮಾಜ ಕಾರ್ಯಕ್ಕೆ 2020ರಲ್ಲಿ ಅಮೆರಿಕದ ಹಾರ್ಮೊನಿ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್​​ ಲಭಿಸಿದೆ. ಹಾಗೇ ಮೈಸೂರು ಜಿಲ್ಲಾಡಳಿತ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

Join Whatsapp