ರಾಜ್ಯದಲ್ಲಿ ನೀತಿ ಸಂಹಿತೆ ಹಿಂದೆಗೆದುಕೊಳ್ಳುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಸರಕಾರದಿಂದ ಪತ್ರ

Prasthutha|

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಹಿನ್ನೆಲೆಯ ನೀತಿ ಸಂಹಿತೆ ಹಿಂದೆಗೆದುಕೊಳ್ಳುವಂತೆ ರಾಜ್ಯ ಮುಖ್ಯ ಚುನಾವಣಾಧಿಕಾರಿ (ಸಿಇಒ)ಮನೋಜ್‌ ಕುಮಾರ್‌ ಮೀನಾ ಅವರಿಗೆ ಸರಕಾರದ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆ ಮುಕ್ತಾಯಗೊಂಡಿರುವುದರಿಂದ ನೀತಿ ಸಂಹಿತೆಗೆ ರಿಯಾಯಿತಿ‌‌‌ ನೀಡಬೇಕೆಂದು‌ ಕೋರಿದ್ದಾರೆ.

- Advertisement -

ಈ ಪತ್ರವನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಕೇಂದ್ರ ಚುನಾವಣ ಆಯೋಗಕ್ಕೆ ಕಳುಹಿಸಿಕೊಟ್ಟಿದೆ.

ಒಂದೆಡೆ ರಾಜ್ಯದ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿರುವ ಸರಕಾರ, ಮತ್ತೊಂದೆಡೆ ಬಜೆಟ್‌ ಅನುಷ್ಠಾನವನ್ನೂ ಮಾಡಬೇಕಿದೆ. ಬಜೆಟ್‌ಗೆ ಅನುಮೋದನೆ ದೊರೆತ ಕೆಲವೇ ದಿನಗಳಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ್ದರಿಂದ ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಅಂದಿನಿಂದ ಈವರೆಗೆ ಬಜೆಟ್‌ನಲ್ಲಿ ಘೋಷಿಸಿರುವ ಯಾವುದೇ ಕಾಮಗಾರಿಗಳು ಅನುಷ್ಠಾನಕ್ಕೆ ಬಂದಿಲ್ಲ.

- Advertisement -

ಟೆಂಡರ್‌ ಪ್ರಕ್ರಿಯೆಯನ್ನಾಗಲೀ, ಕಾರ್ಯಾದೇಶ ನೀಡುವಿಕೆ ಪ್ರಕ್ರಿಯೆಯನ್ನಾಗಲೀ ನಡೆಸಲಾಗಿಲ್ಲ.
ಈ ಎಲ್ಲ ಕಾರಣಗಳ ಹಿನ್ನೆಲೆಯಲ್ಲಿ ಸಿಇಒಗೆ ಪತ್ರ ಬರೆದು ನೀತಿ ಸಂಹಿತೆ ಸಡಿಲಕ್ಕೆ ಮನವಿ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಸಲಹೆ ನೀಡಿದ್ದರು. ಅದರಂತೆ ಮುಖ್ಯ ಕಾರ್ಯದರ್ಶಿ ಪತ್ರ ಬರೆಯಲಾಗಿದೆ.

ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಪತ್ರ
ರಾಜ್ಯದಲ್ಲಿ 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು, ಎಲ್ಲ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣ ವಾಗಿರುವ ಕಾರಣ ಬರ ಹಾಗೂ ಕುಡಿಯುವ ನೀರು ನಿರ್ವ ಹಣೆ ಕುರಿತು ಸಭೆ ನಡೆಸಲು ಹಾಗೂ ಹಾಗೂ ಸಭೆಯ ನಿರ್ಧಾರಗಳಿಗೆ ಮಾದರಿ ನೀತಿ ಸಂಹಿತೆಯಿಂದ ವಿನಾಯಿತಿ ನೀಡಬೇಕೆಂದು ಅನುಮತಿ ಕೋರಿ ರಾಜ್ಯ ಮುಖ್ಯ ಚುನಾ ವಣಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಪತ್ರ ಬರೆದಿದ್ದಾರೆ.



Join Whatsapp