ಶಾಂತಿಮಂತ್ರ ಸಾರಲು ಈ ಸಂದರ್ಭವನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳೋಣ: ದಸರಾ ಉದ್ಘಾಟನೆ ಬಗ್ಗೆ ಹಂಸಲೇಖ ಪ್ರತಿಕ್ರಿಯೆ

Prasthutha|

ಬೆಂಗಳೂರು: 2023ರ ದಸರಾ ಉತ್ಸವವನ್ನು ಸಂಗೀತ ನಿರ್ದೇಶಕ, ಗೀತರಚನಾಕಾರ ಹಂಸಲೇಖ ಅವರು ಉದ್ಘಾಟನೆ ಮಾಡಲಿದ್ದು, ಕನ್ನಡದ ಉಳಿವಿಗೆ, ಶಾಂತಿಮಂತ್ರವನ್ನು ಜಗತ್ತಿಗೆ ಸಾರಲು ಸ್ಫೂರ್ತಿಯಾಗಿ ತೆಗೆದುಕೊಳ್ಳೋಣ ಎಂದು ಹೇಳಿದ್ದಾರೆ.

- Advertisement -

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಅವರು, ದಸರಾ ಹಬ್ಬ, ನಾಲ್ವಡಿ ಕೃಷ್ಣರಾಜ ಒಡೆಯರು, ಕನ್ನಡ ಭಾಷೆ ಸೇರಿದಂತೆ ಅನೇಕ ಸಂಗತಿಗಳ ಕುರಿತು ಹಂಸಲೇಖ ಅವರು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ಇದು ನಾಲ್ವಡಿ ಕೃಷ್ಣರಾಜ ಒಡೆಯರ ಕನಸು. ಜಗತ್ತು ಕಂಡ ಅತ್ಯಂತ ಶ್ರೀಮಂತ ರಾಜ ಅವರು. ನನಗೆ ಈಗ ಸಂತೋಷವನ್ನೂ ತಡೆದುಕೊಳ್ಳುವ ವಯಸ್ಸು. ಅದಕ್ಕೂ ಒಂದು ನಿಯಂತ್ರಣ ಬೇಕು. 35 ವರ್ಷದ ಹಿಂದೆ ಆಗಿದ್ದರೆ ನಾನು ಏನೇನೋ ಮಾತನಾಡುತ್ತಿದ್ದೆ. ಮೊದಲು ನಾವು ರಾಜ್ಯ ಸರ್ಕಾರಕ್ಕೆ ಎಲ್ಲ ಕಲಾವಿದರ ಪರವಾಗಿ ಧನ್ಯವಾದ ತಿಳಿಸಬೇಕು. ಕಳೆದ ವರ್ಷ ನನಗೆ ಆರೋಗ್ಯದಲ್ಲಿ ಏರುಪೇರು ಆದಾಗ ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್​ ಅವರು ಟ್ವೀಟ್​ ಮಾಡಿದ್ದರು. ದಸರಾ ಎಂಬುದು ದೊಡ್ಡ ಸಂಭ್ರಮ. ಅಂಥ ಸಂಭ್ರಮವನ್ನು ಉದ್ಘಾಟಿಸಲು ನನ್ನಂತಹ ಸ್ಟ್ರೀಟ್​ ಫೈಟರ್​ನನ್ನು ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು. ನನ್ನ ಮನೆಯವರು ಪ್ರತ್ಯೇಕವಾಗಿ ಅಭಿನಂದನೆ ತಿಳಿಸಿದ್ದಾರೆ’ ಎಂದು ಹಂಸಲೇಖ ಅವರು ಹೇಳಿದ್ದಾರೆ.

ಬದುಕಿದು ಕನ್ನಡ ಭಿಕ್ಷೆ. ಇಲ್ಲಿ ಸಮರಸವೇ ನಮ್ಮ ರಕ್ಷೆ. ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣ​ ಮೆಟ್ಟಬೇಕು. ಕನ್ನಡವನ್ನು ಯಾರು ಮೆಟ್ಟುತ್ತಾರೋ ಅವರನ್ನು ಮೆಟ್ಟಬೇಕು. ಒಂದು ರಾಜ್ಯ ಹಲವು ಸಿದ್ಧಾಂತ, ಸಂಘಟನೆಯಿಂದ ಹೋರಾಡುತ್ತಿರುತ್ತದೆ. ಅವರನ್ನೆಲ್ಲ ಒಗ್ಗಟ್ಟಿಗೆ ತರೋದು ಕಷ್ಟ. ಆದರೆ ಕನ್ನಡ ಎಂದರೆ ಎಲ್ಲರೂ ಒಂದಾಗಬೇಕು. ಕನ್ನಡ ಎಂದ ತಕ್ಷಣ ಎಲ್ಲ ಪಕ್ಷಗಳು ಒಂದಾಗಬೇಕು ಎಂದು ಹೇಳಿದ್ದಾರೆ.



Join Whatsapp