ಹಾಸನ: ನಾನು ಒಂದು ಕೆಜಿ ರಾಗಿ ಮಾರಾಟ ಮಾಡಿಲ್ಲ ಎಂದು ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಮಾಡುತ್ತೇವೆ. ಹೌದು ಎಂದಾದರೆ ಎಂಎಲ್‌ಸಿ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಸಹ ಆಣೆ ಪ್ರಮಾಣ ಮಾಡಲಿ ಎಂಧೂ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಸವಾಲು ಹಾಕಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಿನ್ನೆ ನಗರದಲ್ಲಿ ಪ್ರತಿಭಟನೆ ವೇಳೆ ಶಿವಲಿಂಗೇಗೌಡ ರಾಗಿಕಳ್ಳ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಇದನ್ನು ಅವರು ಸಾಬೀತು ಮಾಡಿದರೆ ಅವರು ಹೇಳಿದಷ್ಟು ದಂಡ ಕಟ್ಟುವೆ ಎಂದು ಗುಡುಗಿದರು.
ನಾನು ರಾಗಿ ಖರೀದಿ ಹಗರಣದ ವಿರುದ್ಧ ಹೋರಾಟ ಮಾಡಿದ್ದೇನೆ. ಈ ಬಾರಿಯೂ ಬೆಂಬಲ ಬೆಲೆಯಡಿ ರಾಗಿ ಖರೀದಿ ಮಾಡುವಂತೆ ಸದನದಲ್ಲಿ ದನಿ ಎತ್ತಿದ್ದೇನೆ. ಯಾವುದನ್ನೂ ಮಾಡದ ಬಿಜೆಪಿಯವರು ಈಗ ನನ್ನ ಮೇಲೆ ವೃಥಾ ಆರೋಪ ಮಾಡಿದ್ದಾರೆ. ಅವರು ಮಾಡಿರುವ ಆರೋಪವನ್ನು ಸಾಬೀತು ಪಡಿಸಲಿ, ಹಿಟ್ ಅಂಡ್ ರನ್ ಧೋರಣೆ ಬೇಡ ಎಂದರು.
ಅಷ್ಟೇ ಅಲ್ಲ ರವಿಕುಮಾರ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುವೆ ಎಂದ ಶಿವಲಿಂಗೇಗೌಡ, ನಾನು ರಾಗಿ ಕಳವು ಮಾಡಿರುವ ಬಗ್ಗೆ ಅವರ ಬಳಿ ಸಾಕ್ಷಾö್ಯಧಾರ ಇದ್ದರೆ ಒದಗಿಸಬೇಕು. ಪಾಪಿ ಮಕ್ಕಳನ್ನು ಬೀದಿಗೆ ತಳ್ಳಿ ರಾಜಕೀಯ ಮಾಡಬಾರದು ಎಂದು ಕಿಡಿ ಕಾರಿದರು.
ನನ್ನ ಸವಾಲನ್ನು ರವಿಕುಮಾರ್ ಸ್ವೀಕಾರ ಮಾಡಬೇಕು. ನನ್ನ ವಿರುದ್ಧದ ಆರೋಪ ಸತ್ಯ ಎಂದು ಮಂಜುನಾಥನ ಮೇಲೆ ಆಣೆ ಮಾಡಲಿ ಎಂದು ಆಗ್ರಹಿಸಿದರು.
ಇದೇ ವೇಳೆ ಬಿಜೆಪಿ ಮುಖಂಡ ಎನ್.ಆರ್. ಸಂತೋಷ್ ವಿರುದ್ಧ ಹರಿಹಾಯ್ದ ಕೆಎಂಶಿ, ನಿನ್ನೆ ಪ್ರತಿಭಟನೆ ವೇಳೆ ಕರಪತ್ರ ಹಂಚಿ ಮಾಡಿರುವ ಆರೋಪಗಳೆಲ್ಲಾ ನಿರಾಧಾರ.ನಾನು ಯಾವುದೇ ರೀತಿಯ ಶಿಷ್ಟಾಚಾರ ಉಲ್ಲಂಘನೆ ಮಾಡಿಲ್ಲ. ನನ್ನ ಕ್ಷೇತ್ರದ ಅಭಿವೃದ್ಧಿಗಷ್ಟೇ ಒತ್ತು ನೀಡಿದ್ದೇನೆ. ಇವರ ರೀತಿ ಅಡ್ಡಗಾಲು ಹಾಕುವ ಕೆಲಸ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಜನರ ನಡುವೆ ಹೊಡೆದಾಡಿಸುವ ಕೆಲಸ ಮಾಡುತ್ತಿರುವುದು ಇವರು. ನಾನು ಒಂದೇ ಒಂದು ಅಟ್ರಾಸಿಟಿ ಕೇಸ್ ದಾಖಲು ಮಾಡಿಲ್ಲ. ಅವರ ಪಕ್ಷದವರ ವಿರುದ್ಧವೇ ಕೇಸ್ ಮಾಡಿಸಿರುವವರು ಇವರು ಎಂದು ಆರೋಪಿಸಿದರು.
ಕ್ಷೇತ್ರದ ಎಂಎಲ್‌ಎ ಆಗಬೇಕು ಎಂದರೆ ರಾಜ ಮಾರ್ಗದಲ್ಲಿ ಆಗಲಿ. ಅದನ್ನು ಬಿಟ್ಟು ಸುಳ್ಳು ಹೇಳಿ, ಅಪ ಪ್ರಚಾರದ ಮೂಲಕ ಕ್ಷೇತ್ರದ ಜನರ ನೆಮ್ಮದಿ ಹಾಳುವ ಮಾಡುವ ಕೆಲಸ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.
ನಾನು ಯಾವುದೇ ಅಭಿವೃದ್ಧಿ ಕೆಲಸದಲ್ಲಿ 5 ರೂ. ಕಮಿಷನ್ ಪಡೆದಿದ್ದರೂ, ಅದನ್ನು ಸಾಬೀತು ಪಡಿಸಲಿ. ಕ್ಷೇತ್ರಕ್ಕೆ ಸಂತೋಷ್ ಬಂದಮೇಲೆ ನಡೆಯ ಬಾರದ ಕೃತ್ಯಗಳು ನಡೆಯುತ್ತಿವೆ ಎಂದು ಗಂಭೀರ ಆರೋಪ ಮಾಡಿದರು.
ನಾನು ದೇವಾಲಯಗಳನ್ನು ಒಡೆದು ದೇವರನ್ನು ಬೀದಿಗೆ ತಂದಿಲ್ಲ. ಈ ಬಗ್ಗೆ ನನ್ನ ಅವಧಿಯಲ್ಲಿ ಇಡೀ ಕ್ಷೇತ್ರದಲ್ಲಿ ಎಷ್ಟು ದೇವಾಲಯ ಕಟ್ಟಿದ್ದೇನೆ ಎಂಬುದರ ಬಗ್ಗೆ ಒಂದು ಆಲ್‌ಬಂಬ್ ಮಾಡಿ ಬಿಡುಗಡೆ ಮಾಡುವೆ ಎಂದರು. ಮುಖಂಡರಾದ ಬಿಳಿಚೌಡಯ್ಯ, ಬಂಡಿಗೌಡ್ರ ರಾಜಣ್ಣ ಮೊದಲಾದವರಿದ್ದರು.
ಮುಂದಿನ ಚುನಾವಣೆಯಲ್ಲಿ ನಿಮ್ಮ ಸ್ಪರ್ಧೆ ಯಾವ ಪಕ್ಷದಿಂದ ಎಂಬ ಪ್ರಶ್ನೆಗೆ ಸದ್ಯ ನಾನು ಜೆಡಿಎಸ್‌ನಲ್ಲಿದ್ದೇನೆ. ನಮ್ಮ ಕೆಲ ನಾಯಕರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದು ನಿಜ. ಅದು ಶಮನ ಆಗುತ್ತೋ, ಮುಂದುವರಿಯುತ್ತೋ ಗೊತ್ತಿಲ್ಲ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಮುಂದೆ ಯಾವ ಹೆಜ್ಜೆ ಇಡಬೇಕು ಎಂಬುದರ ಬಗ್ಗೆ ಕ್ಷೇತ್ರದ ಮುಖಂಡರು, ಮತದಾರರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇನೆ ಎಂದರು. ಕುಮಾರಣ್ಣ ನನ್ನ ಜೊತೆ ಮಾತನಾಡಿಲ್ಲ. ರೇವಣ್ಣ ಅವರು, ಪ್ರಜ್ವಲ್ ನಿತ್ಯ ಮಾತನಾಡುತ್ತಾರೆ. ದೇವೇಗೌಡರ ಜೊತೆಗೆ ನಾನೇ ಮಾತನಾಡಿದೆ. ಆದರೆ ದುಃಖದಿಂದ ಹೆಚ್ಚು ಮಾತನಾಡಲು ಆಗಲಿಲ್ಲ. ನಾನು ಮಂತ್ರಿಯಾಗಬೇಕು ಎಂದಿದ್ದರೆ ಯಾವಾಗಲೋ ಆಗಬಹುದಿತ್ತು.ಆ ದುರಾಸೆ ನನಗಿಲ್ಲ. ಮುಂದೆ ನಾನು ಏನೇ ಮಾಡಬೇಕು ಎಂದರೂ, ನನ್ನ ಕ್ಷೇತ್ರದ ಜನರ ತೀರ್ಮಾನವೇ ಅಂತಿಮ ಎಂದು ಸ್ಪಷ್ಟಪಡಿಸಿದರು.