ಫ್ಯಾಶಿಸಂ ಮನಸ್ಥಿತಿಯನ್ನು ಹಿಮ್ಮೆಟ್ಟಿಸುವ ಮೂಲಕ ಗಣರಾಜ್ಯದ ಸಂರಕ್ಷಕರಾಗೋಣ: ರಿಯಾಝ್ ಫರಂಗಿಪೇಟೆ

Prasthutha|

ಉಳ್ಳಾಲ: ಪರಕೀಯರ ಆಡಳಿತ ವ್ಯವಸ್ಥೆಯ ವಿರುದ್ಧ ಸುದೀರ್ಘ ಕಾಲ ನಡೆದ ಸಂಘಟಿತ ಹೋರಾಟಗಳಿಂದ ಸ್ವತಂತ್ರಗೊಂಡ ಭಾರತ ದೇಶಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವು ಜಗತ್ತಿನ ಎಲ್ಲಾ ದೇಶಗಳ ಸಂವಿಧಾನಕ್ಕಿಂತ ಶ್ರೇಷ್ಠ ಸಂವಿಧಾನವಾಗಿದೆ. ಸಮಾನತೆ, ಭ್ರಾತೃತ್ವ, ಸಹಬಾಳ್ವೆ, ಬಹುತ್ವಕ್ಕೆ ಮನ್ನಣೆ ನೀಡಿದ ಸಂವಿಧಾನವು ಇಂದು ಫ್ಯಾಶಿಸ್ಟ್ ಶಕ್ತಿಗಳ ಆಡಳಿತ ವ್ಯವಸ್ಥೆಯಿಂದ ಅಪಾಯದ ಅಂತಿಮ ಘಟ್ಟ ತಲುಪಿದೆ. ಫ್ಯಾಶಿಸಂ ಮನಸ್ಥಿತಿಯನ್ನು ಹಿಮ್ಮೆಟ್ಟಿಸುವ ಮೂಲಕ ಪ್ರತಿಯೊಬ್ಬ ಭಾರತೀಯನೂ ಗಣರಾಜ್ಯದ ಸಂರಕ್ಷಕರಾಗಬೇಕಾಗಿದೆ ಎಂದು SDPI ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಕರೆ ನೀಡಿದ್ದಾರೆ.

- Advertisement -


SDPI ಮಂಗಳೂರು ವಿಧಾನಸಭಾ ಕ್ಷೇತ್ರದ ವತಿಯಿಂದ ಕ್ಷೇತ್ರಾಧ್ಯಕ್ಷರಾದ ಇರ್ಷಾದ್ ಅಜ್ಜಿನಡ್ಕ ಅವರ ನೇತೃತ್ವದಲ್ಲಿ ಉಳ್ಳಾಲ ನಗರಸಭಾ ಸಮಿತಿಯ ಕಚೇರಿಯ ಮುಂಭಾಗದಲ್ಲಿ ನಡೆದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.


ದೇಶದ ಮೂಲನಿವಾಸಿಗಳಾದ ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು ಸೇರಿದಂತೆ ತಳ ಸಮುದಾಯಗಳು ನಿರಂತರವಾಗಿ ಸವರ್ಣೀಯ ಶಕ್ತಿಗಳ ಹಿಡಿತದಲ್ಲಿ ಅವಮಾನಕರ ಬದುಕು ನಡೆಸುವಂತಾಗಿದೆ. ಫ್ಯಾಶಿಸಂ ಎನ್ನುವ ಮನಸ್ಥಿತಿ ಇಂದು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಭಾಗವಾಗಿ ಸಂವಿಧಾನವನ್ನೇ ಬದಲಾಯಿಸುವ ಹಂತಕ್ಕೆ ತಲುಪಿರುವುದು ವರ್ತಮಾನದ ಕಳವಳಕಾರಿ ವಿಚಾರವಾಗಿದೆ. ಇಂತಹ ಸಂದರ್ಭದಲ್ಲಿ ಭಾರತೀಯರಾದ ನಾವು ಮೌನ ವಹಿಸಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡುವ ಅಪಮಾನವಾಗುತ್ತದೆ. ಇದರಿಂದ ಸಂವಿಧಾನ ವಿರೋಧಿ ಶಕ್ತಿಗಳು ಇನ್ನಷ್ಟು ಬಲಿಷ್ಠವಾಗಿ ಬೆಳೆದು ನಮ್ಮ ಬದುಕಿಗೇ ಕಂಠಕವಾಗಬಹುದು ಎಂದು ಅವರು ಎಚ್ಚರಿಸಿದರು.
ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಪರಸ್ಪರ ಕೈಜೋಡಿಸಿ ಮನುವಾದಿ ಆಧಾರಿತ ಫ್ಯಾಶಿಸ್ಟ್ ಸಿದ್ಧಾಂತವನ್ನು ಸೋಲಿಸಿ ಸಂವಿಧಾನದ ಮೂಲತತ್ವವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಗಣರಾಜ್ಯೋತ್ಸವ ದಿನದಂದು ಪ್ರತಿಜ್ಞೆಯನ್ನು ಕೈಗೊಳ್ಳಬೇಕು. ಹಾಗಾದರೆ ಮಾತ್ರ ದೇಶದಲ್ಲಿ ವಿನಾಶಕಾರಿಯಾಗಿ ಬೆಳೆಯುತ್ತಿರುವ ಫ್ಯಾಶಿಸಂ ಮನಸ್ಥಿತಿಯನ್ನು ಹಿಮ್ಮೆಟ್ಟಿಸಿ ಗಣರಾಜ್ಯವನ್ನು ಸಂರಕ್ಷಣೆ ಮಾಡಲು ಸಾಧ್ಯ ರಿಯಾಝ್ ಫರಂಗಿಪೇಟೆ ಹೇಳಿದರು.

- Advertisement -


ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು, ಕಳೆದ ಮುಕ್ಕಾಲು ಶತಮಾನಗಳಿಂದ ದೇಶವನ್ನು ಆಡಳಿತ ನಡೆಸುತ್ತಿರುವ ರಾಜಕೀಯ ಪಕ್ಷಗಳು ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತದಲ್ಲಿ ನಿರತವಾದ ಕಾರಣ ಸಂವಿಧಾನದ ಆಶಯಗಳು ಈಡೇರದೆ ದೇಶ ಇಂದಿಗೂ ಭಯ ಮತ್ತು ಹಸಿವಿನಿಂದ ನರಳುತ್ತಿದೆ. ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಎಪ್ಪತ್ತನಾಲ್ಕು ವರ್ಷಗಳ ಹಿಂದೆ ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿ ಇದೊಂದು ಪ್ರಬಲವಾದ ಸಂವಿಧಾನವಾಗಿದೆ, ಇದನ್ನು ಜಾರಿಗೆ ತರಬೇಕಾದವರು ಸಮರ್ಥರೂ ಮತ್ತು ಪ್ರಾಮಾಣಿಕರು ಆಗಿರಬೇಕು. ಇಲ್ಲದಿದ್ದರೆ ಸಂವಿಧಾನ ಎಷ್ಟೇ ಬಲಿಷ್ಠವಾಗಿ ಇದ್ದರೂ ಅದು ಜನಸಾಮಾನ್ಯರಿಗೆ ಯಾವುದೇ ಪ್ರಯೋಜನಕ್ಕೆ ಬಾರದು ಎಂದು ಎಚ್ಚರಿಸಿದ್ದರು. ಅಂಬೇಡ್ಕರ್ ರವರ ಮಾತುಗಳು ಇಂದು ಅಕ್ಷರಶಃ ನಿಜವಾಗಿದೆ. ಸಂವಿಧಾನವನ್ನೇ ಬದಲಾವಣೆ ತರಲು ಪಣತೊಟ್ಟ ವರ್ಗದ ಕೈಯಲ್ಲಿ ಇಂದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ನರಳುತ್ತಿದೆ, ಇದನ್ನು ಮರುಸ್ಥಾಪಿಸಿ ಸಂವಿಧಾನವನ್ನು ಯಥಾವತ್ತಾಗಿ ಜಾರಿಗೊಳಿಸಲು SDPI ಪಕ್ಷದ ಪ್ರತಿಯೊಬ್ಬ ನಾಯಕರು, ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಹೇಳಿದರು.


ಅತಿಥಿಯಾಗಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಮಹಿಳಾ ಸಮಾಜ ಸಂಘಟಿತವಾಗಿ ಹೋರಾಟ ನಡೆಸಿದರೆ ಎಂತಹ ಕ್ರೂರ ವ್ಯವಸ್ಥೆಯನ್ನು ಸರಿದಾರಿಗೆ ತಂದು ಗಣರಾಜ್ಯವನ್ನು ಸಂರಕ್ಷಣೆ ಮಾಡಲು ಸಾಧ್ಯವಿದೆ. ಮಹಿಳೆಯರ ಸಾಂವಿಧಾನಿಕ ಹಕ್ಕಾದ ಹಿಜಾಬ್ ಬಗ್ಗೆ ಪ್ರಶ್ನಿಸುವ ಸಂಘಪರಿವಾರದ ಮುತಾಲಿಕ್ ನಂತಹ ಕೋಮುವಾದಿಗಳನ್ನು ಕಾನೂನಾತ್ಮಕ ರೀತಿಯಲ್ಲಿ ಎದುರಿಸಲು ನಮಗೆ ಗೊತ್ತಿದೆ. ಧರ್ಮದ ಹೆಸರಿನಲ್ಲಿ ಅರಾಜಕತೆ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವ ದುಷ್ಟ ಶಕ್ತಿಗಳನ್ನು ಹೆಡೆಮುರಿ ಕಟ್ಟಿದರೆ ಮಾತ್ರ ಗಣರಾಜ್ಯ ಉಳಿಯುತ್ತದೆ ಎಂದರು
ಕಾರ್ಯಕ್ರಮದಲ್ಲಿ SDPI ರಾಜ್ಯ ಸಮಿತಿಯ ಸಂಯೋಜಕ ನವಾಝ್ ಉಳ್ಳಾಲ, ಕ್ಷೇತ್ರ ಕಾರ್ಯದರ್ಶಿಗಳಾದ ಅಶ್ರಫ್ ಮಂಚಿ, ಉಬೇದುಲ್ಲಾ ಅಮ್ಮೆಂಬಳ, ನಗರಸಭಾ ಸಮಿತಿಯ ಅದ್ಯಕ್ಷರಾದ ಅಬ್ಬಾಸ್ ಎ. ಆರ್, ಉಪಾಧ್ಯಕ್ಷ ಇಮ್ತಿಯಾಝ್ ಕೋಟೆಪುರ , ಮುಸ್ಲಿಂ ಒಕ್ಕೂಟ ಉಳ್ಳಾಲ ಅಧ್ಯಕ್ಷರಾದ ಇಸ್ಮಾಯಿಲ್ ಉಳ್ಳಾಲ, ಮಿಲ್ಲತ್ ನಗರ ಜುಮ್ಮಾ ಮಸೀದಿ ಅಧ್ಯಕ್ಷರಾದ ಖಲೀಲ್ , ನಗರಸಭಾ ಕೌನ್ಸಿಲರ್ ಗಳಾದ ರಮೀಝ್ ಮತ್ತು ಅಸ್ಗರ್ ಆಲಿ ಉಪಸ್ಥಿತರಿದ್ದರು. ಉಳ್ಳಾಲ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಸುಹೈಲ್ ಉಳ್ಳಾಲ ಸ್ವಾಗತಿಸಿದರು, ರವೂಫ್ ಹಳೆಕೋಟೆ ನಿರೂಪಿಸಿ ಧನ್ಯವಾದ ಸಮರ್ಪಿಸಿದರು.

Join Whatsapp