ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಹಾಗೂ ಕೋವಿಡ್ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ದೇವನಹಳ್ಳಿ ಟೌನ್ ಕ್ರೀಡಾಂಗಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಆಯೋಜಿಸಿದ್ದ “73ನೇ ಗಣರಾಜ್ಯೋತ್ಸವ ದಿನಾಚರಣೆ”ಯ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಬ್ರಿಟಿಷರ ಆಳ್ವಿಕೆಯಿಂದ ಭಾರತ ಸ್ವಾತಂತ್ರ್ಯ ಗಳಿಸಿದ ನಂತರ ಹಲವಾರು ಭಾಷೆ, ಸಂಸ್ಕೃತಿ, ಜಾತಿ, ಧರ್ಮ ಹೀಗೆ ವೈವಿಧ್ಯಮಯವಾದಂತಹ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಭಾರತಕ್ಕೆ 1950ರ ಜನವರಿ 26 ರಂದು ಸಂವಿಧಾನವನ್ನು ಅಧಿಕೃತವಾಗಿ ಜಾರಿಗೊಳಿಸಿ, ವಿಶ್ವದಲ್ಲಿ ಭಾರತ ಒಂದು ಸಾರ್ವಭೌಮ, ಸ್ವಾತಂತ್ರ್ಯ ರಾಷ್ಟ್ರವೆಂದು ಸಾರಿದ ಐತಿಹಾಸಿಕ ದಿನವೇ ಗಣರಾಜ್ಯೋತ್ಸವ. ಭಾರತವು ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸ್ವತಂತ್ರ, ಬಲಿಷ್ಠ, ಭವ್ಯ ಭಾರತ ನಿರ್ಮಾಣ ಮಾಡುವ ಹಾಗೂ ರಾಷ್ಟ್ರಕ್ಕೆ ಉತ್ಕೃಷ್ಟವಾದ ಮತ್ತು ಸರ್ವಶ್ರೇಷ್ಠವಾದ ಸಂವಿಧಾನ ನೀಡುವ ನಿಟ್ಟಿನಲ್ಲಿ ರಾಷ್ಟ್ರದ ಅಗ್ರಗಣ್ಯ ಚಿಂತಕರ ಹಾಗೂ ತಜ್ಞರ ಚಿಂತನೆಯ ಫಲವಾಗಿ ಭಾರತ ಸಂವಿಧಾನ ರೂಪುಗೊಂಡಿತು ಎಂದು ಹೇಳಿದರು.
“ಹರ್ ಘರ್ ದಸ್ತಕ್” ಎಂಬ ವಿನೂತನ ಕಾರ್ಯಕ್ರಮದಡಿ ವೈದ್ಯಕೀಯ ತಂಡ ಮನೆಗಳಿಗೆ ಭೇಟಿ ನೀಡಿ, ಕೋವಿಡ್ ಲಸಿಕೆ ನೀಡುವುದರೊಂದಿಗೆ, ಲಸಿಕೆ ಕುರಿತು ಜಾಗೃತಿ ಮೂಡಿಸುತ್ತಿದು ಜಿಲ್ಲೆಯಲ್ಲಿ ಇಲ್ಲಿಯವರೆಗೆ, 2,36,988 ಮನೆಗಳಿಗೆ(ಶೇ. 88 ರಷ್ಟು) ವೈದ್ಯಕೀಯ ತಂಡ ಭೇಟಿ ನೀಡಿದೆ. ಪಿ.ಎಂ. ಕೇರ್ ಅನುದಾನದಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಲಾ ಒಂದು ದ್ರವೀಕೃತ ವೈದ್ಯಕೀಯ ಆಮ್ಲಜನಕ ಘಟಕ ಹಾಗೂ ದೇವನಹಳ್ಳಿಯಲ್ಲಿ 2, ದೊಡ್ಡಬಳ್ಳಾಪುರದಲ್ಲಿ 1 ಹಾಗೂ ನೆಲಮಂಗಲದಲ್ಲಿ 1 ಆಮ್ಲಜನಕ ತಯಾರಕಾ ಘಟಕ(ಪಿಎಸ್ಎ)ವನ್ನು ಸ್ಥಾಪಿಸಲಾಗಿದೆ ಎಂದರು.
ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ದೇಶದಲ್ಲಿ ಅತಿ ಶೀಘ್ರವಾಗಿ ನಿರ್ಮಿಸಲಾದ ದೊಡ್ಡಬಳ್ಳಾಪುರ ತಾಲ್ಲೂಕಿನ 70 ಆಕ್ಸಿಜನೇಟೆಡ್ ಬೆಡ್ಗಳ ಮೊದಲ ಮೇಕ್ ಶಿಫ್ಟ್ ಆಸ್ಪತ್ರೆಯು ಇದೀಗ ತುರ್ತು ಚಿಕಿತ್ಸೆಯ ಸಂದರ್ಭದಲ್ಲೂ ಸಾರ್ವಜನಿಕರ ಉಪಯೋಗಕ್ಕೆ ಸಹಕಾರಿಯಾಗಿದೆ. ಅದರಂತೆಯೇ ಕೋವಿಡ್ 3ನೇ ಅಲೆಯ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿಯಾಗಿ, ಹೊಸಕೋಟೆ ತಾಲ್ಲೂಕಿನಲ್ಲಿ 50 ಹಾಸಿಗೆಯುಳ್ಳ ಮೇಕ್ ಶಿಫ್ಟ್ ಆಸ್ಪತ್ರೆ ಜನವರಿ 24 ರಂದು ಪ್ರಾರಂಭಗೊಂಡಿದೆ.
ನಾಲ್ಕು ತಾಲ್ಲೂಕುಗಳಲ್ಲಿ ಕೋವಿಡ್ ವಾರ್ರೂಂ ಗಳನ್ನು ತೆರೆಯಲಾಗಿದ್ದು 24/7 ಕಾರ್ಯನಿರ್ವಹಿಸುತ್ತಿದೆ. ಕೋವಿಡ್ 3ನೇ ಅಲೆಯ ಸೋಂಕು ಹರಡುವಿಕೆ ತಡೆಗಟ್ಟಲು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ “ವೈದರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮವನ್ನು ಜನವರಿ 20 ರಿಂದ ಪುನರಾರಂಭಿಸಲಾಗಿದ್ದು, ವೈದ್ಯಕೀಯ ತಂಡ ಮನೆಗಳಿಗೆ ಭೇಟಿ ನೀಡಿ ಕೋವಿಡ್ ಸೋಂಕಿನ ಪರೀಕ್ಷೆ, ಆರೋಗ್ಯ ತಪಾಸಣೆ, ಕೋವಿಡ್ ಲಸಿಕೆ ಹಾಗೂವೈದ್ಯಕೀಯ ಕಿಟ್ ನೀಡುವ ಕಾರ್ಯಕ್ರಮ ಇದಾಗಿದೆ.
ಆಯುಷ್ ಇಲಾಖೆ ವತಿಯಿಂದ ಜಿಲ್ಲೆಯ ಕೋವಿಡ್ ಕೇರ್ ಸೆಂಟರ್ಗಳಲ್ಲಿ ದಾಖಲಾದ ಸುಮಾರು 700ಕ್ಕೂ ಹೆಚ್ಚು ರೋಗಿಗಳಿಗೆ ಉಚಿತವಾಗಿ ಆಯುಷ್ ಔಷಧಿಗಳನ್ನು ನೀಡಲಾಗಿದೆ ಎಂದರು.
ದೇಶದ ನಾಗರೀಕರಾಗಿ ಭವ್ಯ ಪರಂಪರೆ, ಸಂಸ್ಕೃತಿ ಇವುಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಯೋಚಿಸಬೇಕಾಗಿದೆ. ಜಾತಿ, ಧರ್ಮ, ಭಾಷೆ, ಪಂಗಡಗಳ ಸಂಕುಚಿತ ಭಾವನೆಯಿಂದ ಹೊರಬಂದು ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು ಮತ್ತು ಐಕ್ಯತೆಯನ್ನು ಕಾಪಾಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡುವ ದಿಕ್ಕಿನಲ್ಲಿ ನಾವು ಒಟ್ಟಾಗಿ ಶ್ರಮಿಸೋಣ. ನಮ್ಮ ಈ ಸುಂದರ ಪ್ರಜಾಪ್ರಭುತ್ವದ ಬೇರುಗಳನ್ನು ಇನ್ನಷ್ಟು ಬಲಗೊಳಿಸೋಣ ಎಂದು ಹೇಳುತ್ತಾ, ಮತ್ತೊಮ್ಮೆ ತಮಗೆಲ್ಲರಿಗೂ ಗಣರಾಜ್ಯೋತ್ಸವ ಶುಭಾಶಯಗಳು ಎಂದು ಹೇಳಿದರು.