SEZ ದುರಂತ | ಸುರಕ್ಷಾ ಕ್ರಮ ಕೈಗೊಳ್ಳದೆ ಕಾರ್ಮಿಕರನ್ನು ಬಲಿ ಪಡೆದ ಕಂಪನಿಗೆ ಪರವಾನಿಗೆ ಕೊಟ್ಟವರ ವಿರುದ್ಧ ತನಿಖೆ ನಡೆಯಲಿ: ಎಸ್.ಡಿ.ಟಿ.ಯು

Prasthutha|

ಮಂಗಳೂರು: ಅಗತ್ಯ ಸುರಕ್ಷಾ ಕ್ರಮ ಕೈಗೊಳ್ಳದೆ ಕಾರ್ಮಿಕರ ಹಕ್ಕುಗಳನ್ನು ಪಾಲಿಸದೆ ಬಡಪಾಯಿ ಕಾರ್ಮಿಕರನ್ದು ದುಡಿಸಿ ಅವರ ಜೀವವನ್ನು ಬಲಿ ಪಡೆದ ಮಂಗಳೂರು ನಗರದ ಹೊರವಲಯದಲ್ಲಿ ವಿಶೇಷ ಆರ್ಥಿಕ ವಲಯ (ಸೆಝ್) ಮುಖಾಂತರ ಕಾರ್ಯಾಚರಿಸುತ್ತಿರುವ ಶ್ರೀ ಉಲ್ಕಾ ಫಿಶ್ ಮಿಲ್ ನಲ್ಲಿ ಸಂಭವಿಸಿದ ವಿಷಾನಿಲ ದುರಂತದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಂಡು ಮೃತರ ಕುಟುಂಬಕ್ಕೆ ಈಗ ಘೋಷಿಸಿದ 15 ಲಕ್ಷ ಕ್ಕೆ ಬದಲಾಗಿ ತಲಾ 25 ಲಕ್ಷ ಕಂಪನಿಯಿಂದ ಪರಿಹಾರ ನೀಡಬೇಕೆಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು) ದ. ಕ ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ ಆಗ್ರಹಿಸಿದ್ದಾರೆ.

- Advertisement -

ಭಾರತದಲ್ಲಿ ದೊಡ್ಡ ವಿದೇಶಿ ಹೂಡಿಕೆಗಳನ್ನು ಆಕರ್ಷಿಸಿ ಅದರ ಮುಖಾಂತರ ಹೆಚ್ಚಿನ ಆರ್ಥಿಕ ಚಟುವಟಿಕೆ ಮತ್ತು ಉದ್ಯೋಗ ಸೃಷ್ಟಿಗಾಗಿ ಭಾರತ ಸರ್ಕಾರ ಕೆಲವು ನಿರ್ದಿಷ್ಟ ಸ್ಥಳಗಳನ್ನು ಗುರುತಿಸಿ ವಿಶೇಷ ವಿನಾಯಿತಿಯೊಂದಿಗೆ ವಿಶೇಷ ಆರ್ಥಿಕ ವಲಯ (ಸೆಝ್) ಎಂದು ಘೋಶಿಸಿದೆ. ಉತ್ಪಾದನೆ, ಕೈಗಾರಿಕೋದ್ಯಮ ಸಂಸ್ಕರಣ ಇತ್ಯಾದಿಗಳಿಗಾಗಿ ಕೆಲವು ನಿರ್ಬಂಧಗಳನ್ನು ಸಡಿಲಿಸಿದ ಸೆಝ್ ವ್ಯಾಪ್ತಿಯಲ್ಲಿ ಸರ್ಕಾರದ ಈ ಅನುಕೂಲತೆಗಳನ್ನು ಆಕರ್ಷಿಸಿ ವಿವಿಧ ಕಂಪನಿಗಳು ಕೈಗಾರಿಕೋದ್ಯಮ ಇತ್ಯಾದಿಗಳನ್ನು ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಸೆಝ್ ವಿನಾಯಿತಿಯನ್ನು ದುರುಪಯೋಗ ಪಡಿಸಿ ಕಾರ್ಮಿಕರಿಗೆ ಅಗತ್ಯ ಸುರಕ್ಷಾ ಕ್ರಮ, ಮೂಲ ಸೌಕರ್ಯ ಒದಗಿಸದೆ ಅವರ ಹಕ್ಕುಗಳನ್ನು ಕಸಿಯುತ್ತಾ ವಿವಿಧ ರೀತಿಯಲ್ಲಿ ಶೋಷಣೆ ಮಾಡುತ್ತಿರುವುದು ಖಂಡನಾರ್ಹ ಎಂದು ಹೇಳಿದ್ದಾರೆ.

- Advertisement -

ದೇಶದ ಸಂಪತ್ತಾದ ಕಾರ್ಮಿಕರ ಹಿತಕ್ಕಾಗಿ ವಿಶೇಷ ನೋಡಲ್ ಅಧಿಕಾರಿ ಮತ್ತು ಸಹಾಯವಾಣಿ ತೆರೆಯಬೇಕು ಹಾಗೂ ಮೂಲ ಸೌಕರ್ಯ, ಅಗತ್ಯ ಜೀವರಕ್ಷಾ ಕವಚ ಇತ್ಯಾದಿಗಳಿಲ್ಲದೇ ಕಾರ್ಮಿಕರನ್ನು ದುಡಿಸಿಕೊಳ್ಳುವ ಕಂಪನಿಗಳ ಪರವಾನಿಗೆ ರದ್ದು ಮಾಡಬೇಕು, ಮಾತ್ರವಲ್ಲ ನಿಯಮಗಳನ್ನು ಗಾಳಿಗೆ ತೂರಿ ಪರವಾನಿಗೆ ನೀಡಿದ ಅಧಿಕಾರಿಗಳ ವಿರುದ್ಧ ಕಾನೂನು ರೀತಿಯ ಕ್ರಮ ಜರಗಿಸಬೇಕೆಂದು ಖಾದರ್ ಫರಂಗಿಪೇಟೆ ಒತ್ತಾಯಿಸಿದ್ದಾರೆ.



Join Whatsapp