ಮಂಗಳೂರು | ಸರಕಾರ ಸಮವಸ್ತ್ರ ನಿಯಮವನ್ನು ವಿದ್ಯಾರ್ಥಿಗಳು ಗೌರವಿಸಲಿ: ಯು.ಟಿ ಖಾದರ್

Prasthutha|

ಮಂಗಳೂರು: ಹಿಜಾಬ್ ಗೊಂದಲದ ನಡುವೆ ನಾಳೆಯಿಂದ SSLC ಪರೀಕ್ಷೆ ನಡೆಯುತ್ತಿದ್ದು, ಸರಕಾರ ಸಮವಸ್ತ್ರ ನಿಯಮವನ್ನು ವಿದ್ಯಾರ್ಥಿಗಳು ಗೌರವ ನೀಡಿ ಪರೀಕ್ಷೆ ಬರೆಯಬೇಕು ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಯು.ಟಿ ಖಾದರ್ ಹೇಳಿದ್ದಾರೆ.

- Advertisement -

ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಅವರು, ಸರಕಾರ ಸಮವಸ್ತ್ರ ನಿಯಮವನ್ನು ವಿದ್ಯಾರ್ಥಿಗಳು ಗೌರವಿಸಬೇಕು. ಹೆತ್ತವರು ಕೂಡಾ ಮುಕ್ತವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು. ವಿದ್ಯಾರ್ಥಿಗಳು ಕೂಡಾ ತಮ್ಮ ಪರೀಕ್ಷೆ ಬಗ್ಗೆ ಗಮನಹರಿಬೇಕು. ಖಾಸಗಿ ಶಾಲೆಗಳು ಕೂಡಾ ಹೆಣ್ಮಕ್ಕಳಿಗೆ ಅನುಕೂಲಕರ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.

ಪರೀಕ್ಷೆ ಪರ ಮುಸ್ಲಿಂ ಧಾರ್ಮಿಕ ನಾಯಕರು ನೀಡಿದ ಹೇಳಿಕೆ ಸ್ವಾಗತಾರ್ಹವಾಗಿದ್ದು,  ಅವರ ಮಾತನ್ನು ಪ್ರತಿಯೊಬ್ಬರು ಪಾಲಿಸಬೇಕು. ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗದೇ ಪರೀಕ್ಷೆ ಬರೆದು ಬರಬೇಕು. ನನ್ನ ಮಗಳಿಗಾದರೂ ಅಷ್ಟೇ ಇದನ್ನೇ ಹೇಳುವೆ ಎಂದು ಹೇಳಿದರು.

- Advertisement -

ಸಿದ್ದರಾಮಯ್ಯ ಪರ ನಿಲ್ಲದ ‘ಕೈ’ ನಾಯಕರು ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ನವರು ಎಲ್ಲಾ ಧರ್ಮದ ಮುಖಂಡರಿಗೂ ಗೌರವ ನೀಡಿದ್ದಾರೆ. ಬಿಜೆಪಿಯವರು ಹೇಳಿಕೆಗಳನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲ ಸ್ವಾಮೀಜಿಗಳ ಜೊತೆಗೆ ಸಿದ್ದರಾಮಯ್ಯ ಆತ್ಮೀಯರಾಗಿದ್ದಾರೆ. ಸ್ವಾಮೀಜಿಗಳು ಕೂಡಾ ಗೌರವದಿಂದ ಆಶೀರ್ವದಿಸುತ್ತಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಆಡಳಿತದಲ್ಲಿ ಯಾವೊಬ್ಬನಾದರೂ ಸ್ವಾಮೀಜಿ ಪ್ರತಿಭಟನೆ ಮಾಡಿದ್ದಾರಾ ? ಸ್ವಾಮೀಜಿಗಳ ವಿರೋಧ ಬಂದಿದ್ದಕ್ಕೆ ಮೌಢ್ಯ ನಿಷೇಧ ಮಸೂದೆ ಕೈ ಬಿಡಲಾಗಿತ್ತು. ಬಿಜೆಪಿ ಸರಕಾರದ ವಿರುದ್ಧ ಹಲವು ಸ್ವಾಮೀಜಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಎಲ್ಲ ದೇಗುಲದ ಅರ್ಚಕರಿಗೆ ವೇತನ ಜಾಸ್ತಿ ಮಾಡಿದ್ದು. ತಸ್ತೀಕು ಹೆಚ್ಚು ಮಾಡಿದ್ದು ಕೂಡಾ ಸಿದ್ದರಾಮಯ್ಯ ಸರಕಾರವಾಗಿದೆ. ಬಿಜೆಪಿ ಸರಕಾರ ಒಂದೇ ಒಂದು ಪೈಸೆ ಜಾಸ್ತಿ ಮಾಡಿಲ್ಲ. ಪೆಟ್ರೋಲ್, ಡೀಸೆಲ್ ರೇಟ್ ಜಾಸ್ತಿ ಆಗುವುದರ ಬಗ್ಗೆ ಬೇರೆಡೆ ಗಮನಹರಿಸಲು ಇಂತಹ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.



Join Whatsapp