ಸರ್ಕಾರದಲ್ಲಿ ಇನ್ನೆಂತಹ ಅಜ್ಞಾನಿ ಮತ್ತು ಅವಿವೇಕಿಗಳು ಇದ್ದಾರೋ..!
ಬೆಂಗಳೂರು: KSRTCಯ ಅಶ್ವಮೇಧ ಎನ್ನುವ ಹೆಸರಿನ 100 ಬಸ್ಗಳಿಗೆ ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ಬೆಂಗಳೂರಿನ ವಿಧಾನಸೌಧದ ಮುಂದೆ ಚಾಲನೆ ನೀಡಿದ್ದರು. ಈ ‘ಅಶ್ವಮೇಧ’ ಎನ್ನುವ ಹೆಸರಿಟ್ಟಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.
ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ನಿಗಮ (KSRTC) ಪರಿಚಯಿಸಿದ ನೂತನ ಬಸ್ಗೆ ಅಶ್ವಮೇಧ ಎಂದು ಹೆಸರಿಟ್ಟವರು ಯಾರೋ ತಿಳಿಯದು. ಅಶ್ವಮೇಧ ಎಂದರೆ ಕುದುರೆ ಬಲಿ ಎಂದರ್ಥ. ಇಲ್ಲಿ ಬಲಿಯಾಗುವುದು ಬಸ್ಸೋ? ಅಥವಾ ಪ್ರಯಾಣಿಕರೋ? ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (KRS)ದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಎಂಬುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಫೆಸ್ಬುಕ್ನಲ್ಲಿ ಪ್ರತಿಕ್ರಿಯಿಸಿರುವ ಅವರು, ಎಂಥಾ ಅಸೂಕ್ಷ್ಮ ಹೆಸರು! ಕನ್ನಡ ಅಥವಾ ಸಂಸ್ಕೃತ ಗೊತ್ತಿಲ್ಲದ ಯಾರೋ ಈ ಹೆಸರು ಪ್ರಸ್ತಾಪಿಸಿದ್ದಾರೆ. ಅದನ್ನು ಅವರಂತಹ ಮತ್ತೊಬ್ಬರು ಒಪ್ಪಿಗೆ ನೀಡಿ ಇಟ್ಟಿದ್ದಾರೆ. ಸರ್ಕಾರದಲ್ಲಿ ಇನ್ನೆಂತಹ ಅಜ್ಞಾನಿ ಮತ್ತು ಅವಿವೇಕಿಗಳು ಇದ್ದರೋ ಎಂದು ಆತಂಕ ವ್ಯಕ್ತಪಡಿಸಿದ್ಧಾರೆ.
ಅಶ್ವಮೇಧ ಬಸ್ಗಳಿಗೆ ಚಾಲನೆ ಕೊಡುವಾಗ ನಮ್ಮ ಕನ್ನಡ ವ್ಯಾಕರಣದ ಪ್ರಕಾಂಡ ಪಂಡಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವ ರೀತಿಯ ಮಾನಸಿಕ ಆಘಾತವಾಗಿರಬಹುದು? ಎಂದು ರವಿಕೃಷ್ಣಾ ರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ.
ಕೆಎಸ್ಆರ್ಟಿಸಿ ಅಧಿಕಾರಿಗಳು ಈ ಕೂಡಲೇ ಇಂತಹ ಅನರ್ಥಕಾರಿ ಹೆಸರನ್ನು ಕೂಡಲೇ ಬದಲಾಯಿಸಬೇಕು. ಬೇಕಾದರೆ ‘ಕುದುರೆಸಾರೋಟು’ ಎಂದೋ, ಅಥವಾ ಸಂಸ್ಕೃತ ಮೂಲದ್ದೇ ಆಗಬೇಕು ಎಂದರೆ ‘ಅಶ್ವಸಂಚಾರ’ ಎಂದೋ ಬದಲಾಯಿಸಿ ಎಂದು ಸಲಹೆ ನೀಡಿದ್ದಾರೆ.