ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಶೀಘ್ರ ಬಗೆಹರಿಸಿ, ಶಿಕ್ಷಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜಿನಾಮೆ ನೀಡಲಿ : ಕ್ಯಾಂಪಸ್ ಫ್ರಂಟ್

Prasthutha|

- Advertisement -

ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಅತಿಥಿ ಉಪನ್ಯಾಸಕರು ಬಹಳಷ್ಟು ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಸರಕಾರ ಅವರ ಬೇಡಿಕೆಗಳನ್ನು ಈಡೇರಿಸದೇ ಚೆಲ್ಲಾಟವಾಡುತ್ತಿರುವುದು ಖಂಡನೀಯ. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಕೋಲಾರ ಜಿಲ್ಲಾ ಸಮಿತಿ ಹಾಗೂ ಅತಿಥಿ ಉಪನ್ಯಾಸಕರು ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ರಾಜ್ಯದಲ್ಲಿ ಸುಮಾರು 14,447 ಅತಿಥಿ ಶಿಕ್ಷಕರಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕಗೊಂಡು ಅರೆಕಾಲಿಕವಾಗಿ ಅಲ್ಪವೇತನ ಪಡೆದುಕೊಂಡು ಸಮಾಜದಲ್ಲಿ ಸ್ವಾಭಿಮಾನದ ಬದುಕನ್ನು ಕಟ್ಟಿಕೊಂಡಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳಿಗೆ ಉಪನ್ಯಾಸ ನೀಡುವ ಶಿಕ್ಷಕರು ಮಾಸಿಕವಾಗಿ ಹನ್ನೊಂದು ಸಾವಿರದಿಂದ ಹದಿಮೂರು ಸಾವಿರದಷ್ಟು ವೇತನವನ್ನು ಪಡೆಯುತ್ತಿದ್ದಾರೆ. ವರ್ಷದಲ್ಲಿ ಎಂಟು ತಿಂಗಳು ಮಾತ್ರ ವೇತನ ಸಿಗುವುದಾದರೂ, ಅದು ಕೈ ಸೇರಲು ಮೂರು ತಿಂಗಳು ಕಾಯಬೇಕಿದೆ.

- Advertisement -

ಉದ್ಯೋಗದಲ್ಲಿ ಯಾವುದೇ ಭಧ್ರತೆಯಾಗಲಿ, ಪಿಎಫ್ ,ಇಎಸ್ಐ ಸಹಿತ ಯಾವುದೇ ಸೌಲಭ್ಯಗಳಿಲ್ಲದೆ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಬೀದಿಗೆ ಬರುವಂತಾಗಿದೆ. ಕಳೆದ ಲಾಕ್‌ಡೌನ್ ಸಂದರ್ಭದಲ್ಲಿ 163 ಅತಿಥಿ ಶಿಕ್ಷಕರು ಪ್ರಾಣ ಕಳೆದುಕೊಂಡಿದ್ದಾರೆಂದು ವರದಿಯಾಗಿದೆ. ಅದರಲ್ಲಿ ಕೆಲವರು ಮನೆಯ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನು ಕೆಲವರು ಸರಿಯಾದ ಚಿಕಿತ್ಸೆ ಪಡೆಯಲು ಹಣವಿಲ್ಲದೆ ಪ್ರಾಣ ಕಳೆದುಕೊಂಡಿದ್ದಾರೆ. ಅವರಿಗೆ ಯಾವುದೇ ಪರಿಹಾರ ಧನವಾಗಲಿ ಕನಿಷ್ಟ ಪಕ್ಷ ಸಾಂತ್ವನವಾಗಲಿ ದೊರಕಲಿಲ್ಲ!
ಸಮಾಜವನ್ನು ಶೈಕ್ಷಣಿಕವಾಗಿ ಕಟ್ಟಿಬೆಳೆಸುವಲ್ಲಿ ಮಹತ್ತರವಾದ ಪಾತ್ರ ನಿರ್ವಹಿಸುವ ಅತಿಥಿ ಉಪನ್ಯಾಸಕರನ್ನು ತಕ್ಷಣ ಖಾಯಂಗೊಳಿಸಬೇಕು. ಉದ್ಯೋಗ ಭಧ್ರತೆಯೊಂದಿಗೆ ಪಿಎಫ್, ಇಎಸ್ಐ ನೀಡಬೇಕು. ಗೌರವಧನ ಹೆಚ್ಚಿಸಬೇಕು. ಬಾಕಿ ಇರುವ ಗೌರವಧನವನ್ನು ತಕ್ಷಣ ಮಂಜೂರುಗೊಳಿಸಬೇಕು. ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಪರಿಹಾರ ಧನ ನೀಡಬೇಕೆಂಬ ನ್ಯಾಯಬದ್ಧ ಬೇಡಿಕೆಗಳನ್ನು ಆಲಿಸದೆ ಸರಕಾರದ ಮೀನಾ ಮೇಷ ಎಣಿಸುತ್ತಿರುವುದು ಆಕ್ಷೇಪಾರ್ಹ.
ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವುದರೊಂದಿಗೆ ಅವರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರವು ಈಡೇರಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕೋಲಾರ ಜಿಲ್ಲಾ ಸಮಿತಿಯು ಹಾಗೂ ಅತಿಥಿ ಉಪನ್ಯಾಸಕರು ಜಂಟಿ ಪತ್ರಿಕಾಗೋಷ್ಠಿಯ ಮುಖಾಂತರ ಸರ್ಕಾರಕ್ಕೆ ಒತ್ತಾಯಿಸಿದರು.

ಅತಿಥಿ ಉಪನ್ಯಾಸಕರನ್ನು ಅಪಮಾನಗೈದ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರಾಜಿನಾಮೆ ನೀಡಲಿ

ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ರವರಿಗೆ ಕೋಲಾರದಲ್ಲಿ ಮನವಿ ನೀಡಲು ತೆರಳಿದಾಗ ಅವರನ್ನು ಅಪಮಾನಗೈದು ಅಸಭ್ಯವಾಗಿ ವರ್ತಿಸಿದ ಘಟನೆಯ ಖಂಡನೀಯ. ತಮ್ಮ ಸಮಸ್ಯೆಗಳ ಬಗ್ಗೆ ಮನವಿ ನೀಡಲು ತೆರಳಿದ ಅತಿಥಿ ಉಪನ್ಯಾಸಕರನ್ನು ಹೀಯಾಳಿಸಿ ತಮ್ಮ ನೀಚ ಸಂಸ್ಕ್ರತಿಯನ್ನು ತೋರ್ಪಡಿಸಿದ ಬಿ.ಸಿ ನಾಗೇಶ್ ರಾಜಿನಾಮೆ ನೀಡಿ ತೆರಳಿಯೆಂದು ಕ್ಯಾಂಪಸ್ ಫ್ರಂಟ್ ಆಕ್ರೋಶ ವ್ಯಕ್ತಪಡಿಸಿತು.

ಪತ್ರಿಕಾಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ರಾಜ್ಯ ಸಮಿತಿ ಸದಸ್ಯರಾದ ಝುಬೈರ್ ಬೆಂಗಳೂರು, ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಡಾ| ಲಕ್ಮೀ ನಾರಾಯಣ್ ಆರ್, ಅಧ್ಯಕ್ಷರಾದ ನೂರ್ ಅಹಮ್ಮದ್, ಉಪಾಧ್ಯಕ್ಷರುಗಳಾದ ಡಾ| ಸರನಪ್ಪ ಗಬ್ಬೂರ್ , ಕಾರ್ಯದರ್ಶಿ ಗೋಪಿನಾಥ್ , ಸದಸ್ಯೆ ಚೇತನಾ ಹಾಗೂ ಕ್ಯಾಂಪಸ್ ಫ್ರಂಟ್ ಕೋಲಾರ ಜಿಲ್ಲಾಧ್ಯಕ್ಷರಾದ ಸೌದ್ ಕೋಲಾರ ಉಪಸ್ಥಿತರಿದ್ದರು.

Join Whatsapp