ಬೆಂಗಳೂರು: ಮನೆ ಮಾತು ಯಾವುದೇ ಆಗಿರಲಿ ಕರ್ನಾಟಕದಲ್ಲಿ ಎಲ್ಲಾ ಮಕ್ಕಳು ಕನ್ನಡ ಭಾಷೆಯನ್ನು ಚೆನ್ನಾಗಿ ಕಲಿಯುವುದು ಅವಶ್ಯಕ ಅಷ್ಟೇ ಅಲ್ಲ ಹಲವು ಬಗೆಯಲ್ಲಿ ಪ್ರಯೋಜನಕಾರಿಯಾದುದು. ಕರ್ನಾಟಕದ ವ್ಯಕ್ತಿಯ ಪರಿಪೂರ್ಣ ವಿಕಸನ ಆಗುವುದು ಕನ್ನಡದಲ್ಲಿ ಸಾಧ್ಯ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಪ್ರೊ.ಅಬ್ದುಲ್ ರಹ್ಮಾನ್ ಪಾಷ ತಿಳಿಸಿದರು.
ಅವರು ಮುಸ್ಲಿಂ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ (ಫೆಮಿ) ಮತ್ತು ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಷನ್ (ಐಟಾ) ಇದರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ಯಶವಂತಪುರದ ಜಾಮಿಯಾ ಮಸೀದಿಯ ಆವರಣದ ಇಸ್ಲಾಮಿಕ್ ಸೆಂಟರ್ ನಲ್ಲಿ ನಡೆದ ಕಾರ್ಯಶಿಬಿರದಲ್ಲಿ ಮಾತನಾಡಿದರು. ಕಾರ್ಯಾಗಾರದಲ್ಲಿ ನಗರದ 25 ಶಿಕ್ಷಕಿಯರು ಭಾಗವಹಿಸಿದ್ದರು.
ಪ್ರಮುಖವಾಗಿ ಉರ್ದು ಮಾತೃಭಾಷೆಯ ಹಿನ್ನೆಲೆಯಿಂದ ಬಂದು ಇಂಗ್ಲೀಷ್ ಮಾಧ್ಯಮ ಶಾಲೆಗಳಲ್ಲಿ ಓದುತ್ತಿರುವ ನಗರದ ಮಕ್ಕಳಿಗೆ ಕನ್ನಡ ಭಾಷಾ ಕೌಶಲಗಳನ್ನು ಕಲಿಸುವಲ್ಲಿ ಇರುವ ಸವಾಲುಗಳಿಗೆ ಉತ್ತರಗಳನ್ನು ಕಂಡುಕೊಳ್ಳುವ ಉದ್ದೇಶ ಈ ‘ಕನ್ನಡ ಕಲಿಸುವ ಶಿಕ್ಷಕರ’ ಕಾರ್ಯಶಿಬಿರದ್ದಾಗಿದೆ. ಕನ್ನಡ ಭಾಷೆಯ ಕುರಿತು ಮಕ್ಕಳಲ್ಲಿ ಪ್ರೀತಿ ಮೂಡಿಸಿ, ಕನ್ನಡವನ್ನು ಚೆನ್ನಾಗಿ ಕಲಿಯುವ ಪ್ರಯೋಜನವನ್ನು ಮಕ್ಕಳಿಗೆ ಮನವರಿಕೆ ಮಾಡಿಸುವುದು ಹೇಗೆ ಎಂದು ಚರ್ಚಿಸಲಾಯಿತು.
ಭಾಷಾ ವಿಜ್ಞಾನಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರೊ.ಅಬ್ದುಲ್ ರೆಹಮಾನ್ ಪಾಷ ಶಿಬಿರ ನಿರ್ದೇಶಕರಾಗಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಉಪಾಧ್ಯಕ್ಷ ಡಾ. ರಾಜಾ ನಾಯ್ಕ್ ಮಾತನಾಡಿ, “ಎಲ್ಲಾ ಭಾಷೆಗಳು ಚಿನ್ನದಂತಹ ಭಾಷೆಗಳು. ಮಾತೃ ಭಾಷೆಯಲ್ಲಿ ಪರಿಣತಿ ಇದ್ದರೆ ಪ್ರಪಂಚದ ಯಾವುದೇ ಭಾಷೆಯನ್ನು ಕಲಿಯಬಹುದು. ಸಾಮಾಜಿಕ ಬದುಕನ್ನು ಯಶಸ್ವಿಯಾಗಿಸಲು ಎಲ್ಲರೂ ಕನ್ನಡವನ್ನು ಚೆನ್ನಾಗಿ ಕಲಿಯಬೇಕು. ಭಾಷೆಯಲ್ಲಿ ಪರಿಣತಿ ಸಿಕ್ಕಾಗ ಆತ್ಮ ವಿಶ್ವಾಸ ಹೆಚ್ಚುತ್ತದೆ” ಎಂದು ತಿಳಿಸಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಮಾಅತೆ ಇಸ್ಲಾಮೀ ಹಿಂದ್ ಕಾರ್ಯದರ್ಶಿ ಮೌಲಾನ ವಹೀದುದ್ದೀನ್ ಖಾನ್ ಮಾತನಾಡಿ ” ಪರಸ್ಪರರನ್ನು ಅರಿಯಲು ಭಾಷೆ ಸಹಕಾರಿ. ಪ್ರತಿಯೊಂದು ಸಂಸ್ಕೃತಿಯ ಬುನಾದಿ ಭಾಷೆಯಾಗಿದೆ. ಭಾಷೆ ಕಲಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು” ಎಂದು ತಿಳಿಸಿದರು. ಐಟಾ ಮುಖ್ಯಸ್ಥ ಪ್ರೊ. ಸನಾವುಲ್ಲಾ, ಫೆಮಿ ಮುಖ್ಯಸ್ಥ ಇಕ್ಬಾಲ್ ಅಹಮದ್, ಇಸ್ಲಾಮೀ ಮಾಹಿತಿ ಕೇಂದ್ರದ ಮುಖ್ಯಸ್ಥ ಎಮ್. ನವಾಝ್, ಶಿಬಿರ ನಿರ್ವಾಹಕ ಹಾರೂನ್ ಬಾಷ ವೇದಿಕೆಯಲ್ಲಿದ್ದರು.