►ಹುಲಿ ಪ್ರತ್ಯಕ್ಷವೆಂದು ಭೀತಿಯಲ್ಲಿದ್ದ ಸಾರ್ವಜನಿಕರು ನಿರಾಳ
ಮಡಿಕೇರಿ: ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯಲ್ಲಿ ಮಂಗಳವಾರ ರಾತ್ರಿ ಹುಲಿ ಪ್ರತ್ಯಕ್ಷವಾಗಿದೆ ಎಂದು ಸುದ್ದಿ ಹಬ್ಬಿದ್ದರಿಂದ ಸುತ್ತಮುತ್ತಲಿನ ಪ್ರದೇಶದ ಜನರು ಭಯಭೀತರಾಗಿದ್ದರು. ವ್ಯಕ್ತಿಯೊಬ್ಬರು ಹುಲಿಯನ್ನು ನೋಡಿರುವುದಾಗಿಯೂ ಸಾರ್ವಜನಿಕರು ಎಚ್ಚರ ವಹಿಸುವಂತೆ ನೆಲ್ಯಹುದಿಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷ ಸಾಬು ವರ್ಗೀಸ್ ಧ್ವನಿ ಸಂದೇಶವನ್ನು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದರು. ಬಳಿಕ ಕೆಲವು ವ್ಯಕ್ತಿಗಳು ಹುಲಿಯೊಂದು ರಸ್ತೆ ದಾಟುತ್ತಿರುವ ನೆಲ್ಯಹುದಿಕೇರಿ ಭಾಗದಲ್ಲದ ವೀಡಿಯೋವನ್ನು ವ್ಯಾಪಕವಾಗಿ ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದರು. ಇದರಿಂದಾಗಿ ಸಿದ್ದಾಪುರ ಮತ್ತು ನೆಲ್ಯಹುದಿಕೇರಿ ಸುತ್ತಮುತ್ತಲಿನ ಜನರು ಆತಂಕದಲ್ಲಿದ್ದರು. ಅಲ್ಲದೆ ಇಂದು ಬೆಳಿಗ್ಗೆ ಜನರು ಮನೆಯಿಂದ ಹೊರಗೆ ಬರಲು ಭಯಪಟ್ಟಿದ್ದರು ಹಾಗೂ ಕೆಲವು ಮಕ್ಕಳು ಮದರಸಾಗೆ ತೆರಳದೆ ಮನೆಯಲ್ಲೇ ಉಳಿದಿದ್ದರು. ಇಂದು ಬೆಳಿಗ್ಗೆ ಕುಶಾಲನಗರ ವ್ಯಾಪ್ತಿಯ ಅರಣ್ಯಾಧಿಕಾರಿ ಸುಬ್ಬರಾಯ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ನೆಲ್ಯಹುದಿಕೇರಿ ಸೇತುವೆಯ ಪಕ್ಕದ ಸಿದ್ದಾಪುರ ರಸ್ತೆಯಲ್ಲಿ ಚಿರತೆ ಬೆಕ್ಕಿನ ಮೃತದೇಹ ಪತ್ತೆಯಾಗಿದೆ. 3-4 ದಿನಗಳ ಹಿಂದೆ ಸತ್ತಿರಬಹುದು ಎಂದು ಅಂದಾಜಿಸಲಾಗಿದೆ. ಬಳಿಕ ಅಧಿಕಾರಿ ಹುಲಿ ನೋಡಿದೆ ಎನ್ನಲಾದ ವ್ಯಕ್ತಿಯನ್ನು ಸಂಪರ್ಕಿಸಿದಾಗ, ಹುಲಿ ಮರಿಯ ರೀತಿಯ ಪ್ರಾಣಿಯನ್ನು ರಾತ್ರಿ ನೋಡಿರುವುದಾಗಿ ಹೇಳಿದರು.
ಅರಣ್ಯಾಧಿಕಾರಿ ಸುಬ್ಬರಾಯ ಮಾಧ್ಯಮದೊಂದಿಗೆ ಮಾತನಾಡಿ, ಸ್ಥಳ ಪರಿಶೀಲನೆ ಮಾಡಲಾಗಿದೆ. ಆದರೆ ಹುಲಿಯ ಯಾವುದೇ ಹೆಜ್ಜೆ ಗುರುತುಗಳು ಪತ್ತೆಯಾಗಿಲ್ಲ. ವಾಟ್ಸಾಪ್ ಗುಂಪುಗಳಲ್ಲಿ ಹರಿದಾಡುತ್ತಿರುವ ಹುಲಿಯ ವಿಡಿಯೋ ಹಳೆಯ ವೀಡಿಯೋವಾಗಿದೆ. ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.