►ಪರಿಷ್ಕೃತ ಸಮಿತಿಯಲ್ಲಿ ಮುಸ್ಲಿಂ & ಕ್ರಿಶ್ಚಿಯನ್ ಮುಖಂಡರಿಗೆ ಸ್ಥಾನ: ಇದು ‘ಪ್ರಸ್ತುತ ನ್ಯೂಸ್’ ವರದಿಯ ಫಲಶ್ರುತಿ
ಬೆಂಗಳೂರು : ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಯ ವಿಧಾನ ಪರಿಷತ್ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆ ಸಂಬಂಧ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಮತ್ತು ಚುನಾವಣಾ ತಂತ್ರಗಳನ್ನು ರೂಪಿಸುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷರು ರಚಿಸಿದ್ದ “ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆ ಉಪಚುನಾವಣೆ ಉಸ್ತುವಾರಿ ಸಮಿತಿ’’ ಪರಿಷ್ಕರಣೆಯಾಗಿದೆ. ಪರಿಷ್ಕೃತ ಸಮಿತಿಯಲ್ಲಿ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತರಿಗೆ ಅವಕಾಶ ನೀಡಲಾಗಿದೆ.
10 ಮಂದಿ ಸದಸ್ಯರಿದ್ದ ಸಮಿತಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಒಬ್ಬರನ್ನು ಸಮಿತಿಯಿಂದ ಕೈಬಿಟ್ಟು ಮೂವರು ಹೊಸಬರನ್ನು ಸಮಿತಿಗೆ ಸೇರಿಸಲಾಗಿದೆ. ಪರಿಷ್ಕೃತ ಪಟ್ಟಿಯಲ್ಲಿ 12 ಮಂದಿ ಸದಸ್ಯರು ಸ್ಥಾನ ಪಡೆದುಕೊಂಡಿದ್ದಾರೆ. ಇಬ್ಬರು ಅಲ್ಪಸಂಖ್ಯಾತರಿಗೆ ಮಣೆ ಹಾಕಲಾಗಿದ್ದು, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರಾದ ಉಡುಪಿಯ ಎಂ.ಎ ಗಫೂರ್ ಸಮಿತಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯ ಪರಿಷ್ಕೃತ ಸಮಿತಿಯಲ್ಲಿ, ಕಾರ್ಕಳದ ಉದಯ್ ಕುಮಾರ್ ಶೆಟ್ಟಿ ಅವರನ್ನು ಕೈಬಿಡಲಾಗಿದ್ದು, ಐವನ್ ಡಿಸೋಜಾ, ಎಂ.ಎ ಗಫೂರ್ ಮತ್ತು ಅಶೋಕ್ ಕೊಡವೂರ್ ಅವರನ್ನು ಸೇರಿಸಲಾಗಿದೆ. ಉಳಿದ 9 ಮಂದಿಯನ್ನು ಉಳಿಸಿಕೊಳ್ಳಲಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿಗಳ ಅಭಿಪ್ರಾಯಗಳನ್ನು ಪಡೆಯಬೇಕು ಎಂದು ಕೆಪಿಸಿಸಿ ಅಧ್ಯಕ್ಷರು ಆದೇಶದಲ್ಲಿ ಸೂಚನೆ ನೀಡಿದ್ದಾರೆ. ಅವಿಭಜಿತ ಜಿಲ್ಲೆಯ ಪರಾಜಿತ ಅಭ್ಯರ್ಥಿಗಳಾದ ಗೋಪಾಲ್ ಪೂಜಾರಿ, ಉದಯ್ ಶೆಟ್ಟಿ, ಜೆ.ಆರ್ ಲೋಬೋ, ಇನಾಯತ್ ಅಲಿ, ರಕ್ಷಿತ್ ಶಿವರಾಂ, ಮಿಥುನ್ ರೈ, ಜೀ ಕೃಷ್ಣಪ್ಪ, ಪ್ರಸಾದ್ ಕಾಂಚನ್ ಮತ್ತು ದಿನೇಶ್ ಹೆಗ್ಡೆ ಅವರ ಅಭಿಪ್ರಾಯ ಪಡೆದು ಉಪಚುನಾವಣೆಗೆ ಸಂಭಾವ್ಯ ಅಭ್ಯರ್ಥಿಯನ್ನು ಕೆಪಿಸಿಸಿಗೆ ಶಿಫಾರಸು ಮಾಡುವಂತೆ ಕೆಪಿಸಿಸಿ ಅಧ್ಯಕ್ಷರು ಆದೇಶದಲ್ಲಿ ತಿಳಿಸಿದ್ದಾರೆ.
ಜೂನ್ 18 ರಂದು ರಚನೆಯಾಗಿದ್ದ ಈ ಸಮಿತಿಯಲ್ಲಿ ಮುಸ್ಲಿಮರಿಗೆ ಅವಕಾಶ ನೀಡಿರಲಿಲ್ಲ. ಪ್ರಸ್ತುತ ನ್ಯೂಸ್ ವರದಿಯ ಬಳಿಕ ಈ ಸಮಿತಿ ಬಗ್ಗೆ ಮುಸ್ಲಿಮರಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಮಾಧ್ಯಮಗಳು ಮತ್ತು ಜಾಲತಾಣಗಳಲ್ಲಿ ಪ್ರಸ್ತುತ ನ್ಯೂಸ್ ವರದಿ ಸಂಚಲನಕ್ಕೆ ಕಾರಣವಾಗಿತ್ತು. ಬಳಿಕ ಜಿಲ್ಲಾ ಕಾಂಗ್ರೆಸ್ ನಾಯಕರು ಕೆಪಿಸಿಸಿ ನಾಯಕರನ್ನು ಸಂಪರ್ಕಿಸಿ ಮುಸ್ಲಿಮರಿಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದರು. ಅದರಂತೆ ಕೆಪಿಸಿಸಿ ಅಧ್ಯಕ್ಷರು, ಅಲ್ಪಸಂಖ್ಯಾತರಿಗೆ ಅವಕಾಶ ಒದಗಿಸಿ ಸಮಿತಿಯಲ್ಲಿ ಬದಲಾವಣೆ ಮಾಡಿ ಮುಸ್ಲಿಮರಿಗೂ ಅವಕಾಶ ನೀಡಿದ್ದಾರೆ.