ಸೋಮವಾರದಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ: ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಿದ್ಧತೆ

Prasthutha|


ಬೆಂಗಳೂರು: ರಾಜ್ಯ ವಿಧಾನಮಂಡಲದ ಅಧಿವೇಶನ ಸೋಮವಾರ ಬೆಳಗಾವಿಯಲ್ಲಿ ಆರಂಭವಾಗಲಿದ್ದು ನಿತ್ಯದ ಜೀವನಕ್ಕಾಗಿ ಜನ ಎದುರಿಸುತ್ತಿರುವ ಸಂಕಟವೇ ಪ್ರತಿಪಕ್ಷಗಳ ಪಾಲಿನ ಅಸ್ತ್ರವಾಗಿ ಸರ್ಕಾರದ ಮೇಲೆ ಎರಗುವುದು ನಿಶ್ಚಿತವಾಗಿದೆ.

- Advertisement -


ಅದೇ ರೀತಿ ಬಿಟ್ ಕಾಯಿನ್ ವಿವಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸರ್ಕಾರದ ಹಲವು ನಾಯಕರ ಪಾಲಿಗೆ ತಲೆನೋವಾಗಿ ಕಾಡುವ ಸಾಧ್ಯತೆಗಳು ದಟ್ಟವಾಗಿವೆ.
ಅಂದ ಹಾಗೆ ರೈತರು, ಕೋವಿಡ್ ಸಂತ್ರಸ್ತರು, ಬಡ-ಮಧ್ಯದ ವರ್ಗದ ಜನರು ಎದುರಿಸುತ್ತಿರುವ ಸಂಕಟಗಳು ಮಿತಿ ಮೀರಿದ್ದು ಈ ಅಂಶವೇ ಸರ್ಕಾರಕ್ಕೆ ದೊಡ್ಡ ಮಟ್ಟದ ತಲೆನೋವಾಗಿ ಕಾಡುವುದು ಖಚಿತ.ಅಕಾಲಿಕ ಮಳೆಯಿಂದಾಗಿ ರಾಜ್ಯಾದ್ಯಂತ ಹತ್ತು ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಮೌಲ್ಯದ ಬೆಳೆ ಮತ್ತು ಆಸ್ತಿ-ಪಾಸ್ತಿಗೆ ಹಾನಿಯಾಗಿದ್ದು ಇದಕ್ಕೆ ಪ್ರತಿಯಾಗಿ ಸರ್ಕಾರದಿಂದ ಸೂಕ್ತ ಪರಿಹಾರ ಕ್ರಮವಾಗಿಲ್ಲ.


ಕೋವಿಡ್ ಕಂಟಕ ಎದುರಾದ ನಂತರ ರಾಜ್ಯ ಸರ್ಕಾರದ ಬೊಕ್ಕಸ ಕ್ಷೀಣಿಸಿದ್ದು ಅದರ ಆದಾಯ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಪ್ರತಿ ವರ್ಷ ಬಂಪರ್ ಆದಾಯ ತಂದುಕೊಡುತ್ತಿದ್ದ ಅಬಕಾರಿ ಬಾಬ್ತಿನಲ್ಲೂ ಈ ಬಾರಿ ನಿರೀಕ್ಷಿತ ಪ್ರಮಾಣದ ಆದಾಯ ಲಭ್ಯವಾಗದೇ ಇರುವುದು ಸರ್ಕಾರದ ಪಾಲಿಗೆ ತಲೆನೋವಾಗಿದೆ. ಕೇಂದ್ರ ಸರ್ಕಾರದ ಜಿ.ಎಸ್.ಟಿ ನೀತಿಯಿಂದ ಗಣನೀಯ ಪ್ರಮಾಣದ ಆದಾಯವನ್ನು ಕಳೆದುಕೊಂಡಿರುವ ಸರ್ಕಾರ,ಹೀಗೆ ತನಗಾಗುತ್ತಿರುವ ಕೊರತೆಗೆ ಪ್ರತಿಯಾಗಿ ಕೇಂದ್ರದಿಂದ ನಿರೀಕ್ಷಿಸಿದಷ್ಟು ಹಣ ಬರುತ್ತಿಲ್ಲ. ಇದೇ ಕಾರಣಕ್ಕಾಗಿ ಕಳೆದ ಬಜೆಟ್ನಲಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಬಜೆಟ್ ಗಾತ್ರವನ್ನು ಕಡಿತಗೊಳಿಸಲಾಗಿತ್ತಾದರೂ ಈ ಬಾರಿ ನಿಗದಿಗೊಳಿಸಿದ ಹಣವನ್ನೂ ಇಲಾಖಾವಾರು ಬಿಡುಗಡೆ ಮಾಡಲು ಸಾಧ್ಯವೇ ಆಗುತ್ತಿಲ್ಲ. ಹೀಗಾಗಿ ರಾಜ್ಯದ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಿರೀಕ್ಷಿತ ಪ್ರಮಾಣದ ಕೆಲಸ ಕಾರ್ಯಗಳಾಗದೆ ಆಡಳಿತಾರೂಢ ಪಕ್ಷ ಮತ್ತು ಪ್ರತಿಪಕ್ಷಗಳ ಸದಸ್ಯರು ಕುಪಿತಗೊಂಡಿದ್ದಾರೆ.

- Advertisement -

ಈ ಮಧ್ಯೆ ಕೋವಿಡ್ನಿಂತದ ನಿಧನರಾದವರ ಕುಟುಂಬಗಳಿಗೆ ತಲಾ ಲಕ್ಷ ರೂ ಪರಿಹಾರ ನೀಡುವುದಾಗಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಘೋಷಿಸಲಾಗಿತ್ತಾದರೂ ಇದುವರೆಗೆ ಸದರಿ ಪರಿಹಾರದ ಮೊತ್ತ ಸಂಬಂಧಿಸಿದವರಿಗೆ ತಲುಪಿಲ್ಲ.
ಹೀಗಾಗಿ ರಾಜ್ಯದ ಎಲ್ಲೆಡೆಯಿಂದ ಸಂತ್ರಸ್ತ ಕುಟುಂಬಗಳ ಕೂಗು ಕೇಳಿ ಬರುತ್ತಿದ್ದು ಈ ಅಂಶವನ್ನು ಹಿಡಿದುಕೊಂಡು ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ನಿಶ್ಚಿತ.
ಈ ಮಧ್ಯೆ ರಾಜ್ಯದಲ್ಲಿ ಮಳೆಯಿಂದಾದ ಹಾನಿ ಹತ್ತು ಸಾವಿರ ಕೋಟಿ ರೂಪಾಯಿಗಳಿಗೂ ಮೀರಿದ್ದು ಪರಿಹಾರ ಕ್ರಮವನ್ನು ಕೈಗೊಳ್ಳಲು ಸರ್ಕಾರದ ಬಳಿ ಹಣದ ಕೊರತೆ ಇದೆ.
ಆದರೆ ರೈತರು ಅನುಭವಿಸಿದ ಬೆಳೆ ನಷ್ಟಕ್ಕೆ ಪರಿಹಾರ ರೂಪದಲ್ಲಿ ಕಿಂಚಿತ್ತಾದರೂ ನೆರವು ನೀಡಬೇಕಾದ ಸರ್ಕಾರ ಮೌನವಾಗಿದೆ ಎಂದು ಪ್ರತಿಪಕ್ಷಗಳು ಆರೋಪಿಸಲಿವೆ.


ಈ ಮಧ್ಯೆ ರಾಜ್ಯದ ಕೈಗಾರಿಕಾ ಬೆಳವಣಿಗೆ ಕುಂಠಿತವಾಗಿದ್ದು ಅಸಂಖ್ಯಾತ ಉದ್ಯೋಗಗಳು ನಷ್ಟವಾಗಿವೆ.ಆದರೆ ಇಂತಹ ಸಂದರ್ಭದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಪುನಶ್ವೇತನಕ್ಕೆ ಸರ್ಕಾರ ಯಾವ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕಿತ್ತೋ?ಅದನ್ನು ಮಾಡಿಲ್ಲ ಎಂಬುದು ಪ್ರತಿಪಕ್ಷಗಳ ಆರೋಪ. ಕೋವಿಡ್ ಕಾಲಘಟ್ಟದಲ್ಲಿ ಸರ್ಕಾರ ನಿರೀಕ್ಷಿತ ಪ್ರಮಾಣದ ತೆರಿಗೆ ಸಂಗ್ರಹವಾಗದೆ ಕೊರತೆ ಎದುರಿಸುತ್ತಿರುವುದು ಸಹಜ.ಆದರೆ ಲಭ್ಯವಿರುವ ಹಣಕಾಸನ್ನು ಆದ್ಯತೆಯ ಮೇಲೆ ಹಂಚಿಕೆ ಮಾಡುವ ಪ್ರಾಮಾಣಿಕತೆ ಸರ್ಕಾರದಿಂದ ಆಗುತ್ತಿಲ್ಲ ಎಂಬುದು ಪ್ರತಿಪಕ್ಷಗಳ ದೂರು.
ಹೀಗೆ ಹತ್ತು ಹಲವು ವಿಷಯಗಳು ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿ ಸರ್ಕಾರಕ್ಕೆ ತಲೆನೋವಾಗುವುದು ಖಚಿತವಾಗಿದ್ದು ಇದನ್ನು ಸರ್ಕಾರ ಹೇಗೆ ಎದುರಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Join Whatsapp