ಇಂದಿನಿಂದ ವಿಧಾನಮಂಡಲ ಅಧಿವೇಶನ: ಹಿಜಾಬ್ ನಿಷೇಧ ಪ್ರಶ್ನಿಸಲು ವಿಪಕ್ಷ ಸಿದ್ಧತೆ

Prasthutha|

►ಮಾತಿನ ಯುದ್ಧಕ್ಕೆ ವೇದಿಕೆ ಅಣಿ

- Advertisement -

ಬೆಂಗಳೂರು: ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಜಾಗತಿಕ ವಿವಾದವಾಗಿ ಪರಿಣಮಿಸಿರುವ ಬೆನ್ನಲ್ಲೇ ಸೋಮವಾರದಿಂದ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಈ ಬಾರಿಯ ಕಲಾಪ ದೇಶಾದ್ಯಂತ ಕುತೂಹಲ ಕೆರಳಿಸಿದೆ.


ಹಿಜಾಬ್ – ಕೇಸರಿ ವಿವಾದ ಪ್ರಸ್ತುತ ರಾಜ್ಯ ಹೈಕೋರ್ಟ್, ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು, ಈ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ದೊರೆಯುವ ಸಾಧ್ಯತೆ ಕಡಿಮೆ. ಆದರೆ ಕಲಾಪದ ಸಂದರ್ಭದಲ್ಲಿ ಇದರ ಕಿಡಿ ಅಲ್ಲಲ್ಲಿ ಹೊತ್ತಿಕೊಳ್ಳಬಹುದು. ಇದು ಯಾವ ಸ್ವರೂಪ ಪಡೆಯಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಸರ್ಕಾರದ ವೈಫಲ್ಯವನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷದ ಮೇಲೆ ಮುಗಿಬೀಳಲು ವಿರೋಧ ಪಕ್ಷಗಳು ಸಜ್ಜಾಗಿವೆ. ಮಾತಿನ ಯುದ್ಧಕ್ಕೆ ವೇದಿಕೆ ಅಣಿಯಾಗಿದೆ. ಕಾಂಗ್ರೆಸ್ ತನ್ನದೇ ಆದ ಕಾರ್ಯತಂತ್ರ ಅಳವಡಿಸಿಕೊಂಡಿದೆ. ಪಂಚ ರಾಜ್ಯಗಳ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಟೀಕೆ ಮಾಡುವಾಗ ಎಚ್ಚರಿಕೆ ಹೆಜ್ಜೆ ಇಡಲು ನಿರ್ಧರಿಸಿದೆ.
ಮುಂದಿನ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಹುಮ್ಮಸ್ಸಿನಲ್ಲಿರುವ ಜೆಡಿಎಸ್ ಅಧಿವೇಶನದಲ್ಲಿ ತನ್ನ ಅಸ್ತಿತ್ವ, ಮಹತ್ವವನ್ನು ಸಾಬೀತುಪಡಿಸುವ ಕಾರ್ಯತಂತ್ರದಲ್ಲಿ ಮುಳುಗಿದೆ.

- Advertisement -


ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮೊದಲ ದಿನ ಬೆಳಿಗ್ಗೆ 11 ಗಂಟೆಗೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದು, ಈ ಮೂಲಕ ಹತ್ತು ದಿನಗಳ ಅಧಿವೇಶನಕ್ಕೆ ಚಾಲನೆ ದೊರೆಯಲಿದೆ. ಹತ್ತು ದಿನದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿದು ಪ್ರತಿದಿನ ಒಂದಲ್ಲಾ ಒಂದು ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ತುದಿಗಾಲ ಮೇಲೆ ನಿಂತಿವೆ.
ಈ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ತಮ್ಮದೇ ಆದ ಅಸ್ತ್ರಗಳನ್ನು ಬತ್ತಳಿಕೆಯಲ್ಲಿ ಸಿದ್ಧ ಮಾಡಿಕೊಂಡಿವೆ.


ಅಗತ್ಯ ವಸ್ತುಗಳ ಬೆಲೆ ಏರಿಕೆ, ಮೇಕೆದಾಟು ಯೋಜನೆ, ಬೆಳೆ ವಿಮೆ ಸಮಸ್ಯೆ, ರಾಗಿ ಖರೀದಿಗೆ ಹೇರಿರುವ ಮಿತಿ ಕೇಂದ್ರದ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿರುವ ನದಿಜೋಡಣೆ ವಿಚಾರ, ಕೊರೊನಾ ಸಂತ್ರಸ್ಥರಿಗೆ ತಲುಪದ ಪರಿಹಾರ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳನ್ನು ವಿಪಕ್ಷಗಳು ಸದನದಲ್ಲಿ ಪ್ರಸ್ತಾಪಿಸಲಿದ್ದು, ಸದನ ಕಾವೇರುವುದು ನಿಶ್ಚಿತ.
ರಾಜ್ಯಪಾಲರು ತಮ್ಮ ಭಾಷಣದಲ್ಲಿ ಸರ್ಕಾರದ ದಿಕ್ಕು-ದಿಸೆಗಳನ್ನು ಸದನದ ಮುಂದಿಡಲಿದ್ದಾರೆ.


ರಾಜ್ಯದ ರಾಜ್ಯಪಾಲರಾದ ನಂತರ ಥಾವರ್‌ಚಂದ್ ಗೆಹ್ಲೋಟ್‌ರವರು ಮೊದಲ ಬಾರಿಗೆ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾರೆ. ಅಧಿವೇಶನದಲ್ಲಿ ಕರ್ನಾಟಕ ಸ್ಟಾಂಪ್ಸ್ ಮತ್ತು ಕ್ರಿಮಿನಲ್ ತಿದ್ದುಪಡಿ ವಿಧೇಯಕ ಸೇರಿದಂತೆ ಎರಡೂ ವಿಧೇಯಕಗಳು ಮಂಡನೆಯಾಗಿ ಚರ್ಚೆಗೆ ಬರಲಿವೆ.
ಕಳೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಮತಾಂತರ ನಿಷೇಧ ಕಾಯ್ದೆ ವಿಧಾನ ಪರಿಷತ್‌ನಲ್ಲಿ ಇನ್ನೂ ಅಂಗೀಕಾರಗೊಂಡಿಲ್ಲ. ಈ ಅಧಿವೇಶನದಲ್ಲಿ ಪರಿಷತ್‌ನಲ್ಲಿ ಈ ಕಾಯ್ದೆಗೆ ಅಂಗೀಕಾರ ಪಡೆಯಲು ಸರ್ಕಾರ ಮುಂದಾಗಲಿದ್ದು, ಈ ಕಾಯ್ದೆಯೂ ಕೋಲಾಹಲಕ್ಕೆ ಕಾರಣವಾಗುವ ಸಾಧ್ಯತೆಗಳು ಹೆಚ್ಚಿವೆ.


ಪ್ರತಿಪಕ್ಷಗಳು ವಿಧಾನಸಭೆಯಲ್ಲಿ ಪ್ರಸ್ತಾಪಿಸುವ ವಿಷಯಗಳನ್ನು ಸಮರ್ಥವಾಗಿ ಎದುರಿಸಲು ಆಡಳಿತ ಪಕ್ಷವು ಸಂಪೂರ್ಣ ಸಜ್ಜಾಗಿದೆ. ಪ್ರತಿಪಕ್ಷಗಳ ಅಸ್ತ್ರಗಳಿಗೆ ತನ್ನದೇ ಆದ ಪ್ರತ್ಯಾಸ್ತ್ರಗಳನ್ನೂ ಆಡಳಿತ ಪಕ್ಷ ಸಿದ್ಧ ಮಾಡಿಟ್ಟುಕೊಂಡಿದೆ.
ವಿರೋಧ ಪಕ್ಷಗಳು ಸದನದಲ್ಲಿ ಪ್ರಸ್ತಾಪಿಸುವ ವಿಚಾರಕ್ಕೆ ತೀಕ್ಷ್ಣವಾಗಿ ಉತ್ತರ ನೀಡಿ ಎಲ್ಲವನ್ನೂ ಸಮರ್ಥಿಸಿಕೊಂಡು ಸರ್ಕಾರದ ರಕ್ಷಣೆಗೆ ನಿಲ್ಲಲು ಸಚಿವರ ಪಡೆಯೇ ಸಿದ್ಧಗೊಂಡಿದೆ. ಹಾಗಾಗಿ, ಈ ವಿಧಾನ ಮಂಡಲದ ಅಧಿವೇಶನ, ವಾದ-ಪ್ರತಿವಾದ, ಟೀಕೆ-ಪ್ರತಿಟೀಕೆ, ಆರೋಪ-ಪ್ರತ್ಯಾರೋಪ, ಮೊನಚು ಮಾತುಗಳಿಗೆ ವೇದಿಕೆಯಾಗಲಿದೆ.



Join Whatsapp