ಕನ್ನಡವನ್ನು ಭಾರತದಲ್ಲಿ ಅತ್ಯಂತ ಕೆಟ್ಟ ಭಾಷೆ ಎಂದು ಗೂಗಲ್ ಕರೆದಿದ್ದು, ಇದು ಕನ್ನಡಿಗರ ಹೆಮ್ಮೆಯನ್ನು ಅವಮಾನಿಸುವ ಗೂಗಲ್ನ ಪ್ರಯತ್ನವಾಗಿದೆ. ಗೂಗಲ್ ಕನ್ನಡಿಗರ ಕ್ಷಮೆಯಾಚಿಸಬೇಕು. ನಮ್ಮ ಸುಂದರ ಭಾಷೆಯ ಚಿತ್ರಣವನ್ನು ಕೆಡಿಸಿದ್ದಕ್ಕಾಗಿ ಗೂಗಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 2500 ವರ್ಷಗಳ ಹಿಂದೆಯೇ ಕನ್ನಡ ಭಾಷೆ ಅಸ್ತಿತ್ವದಲ್ಲಿತ್ತು ಎಂದು ಸಾಬೀತಾಗಿದೆ. ಜೊತೆಗೆ ಕನ್ನಡಕ್ಕೆ ತನ್ನದೇ ಆದ ಇತಿಹಾಸವಿದ್ದು, ಕನ್ನಡ ಭಾಷೆ ಕನ್ನಡಿಗರ ಹೆಮ್ಮೆ ಎಂದು ತಿಳಿಸಿದ್ದಾರೆ.
ಭಾರತದ ಕೆಟ್ಟ ಭಾಷೆ ಯಾವುದು ಎಂದು ಗೂಗಲ್ ನಲ್ಲಿ ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿತ್ತು. ಇದು ಬೆಳಕಿಗೆ ಬರುತ್ತಿದ್ದಂತೆ ಗೂಗಲ್ ಎಚ್ಚೆತ್ತುಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ಕೂಡ ಗೂಗಲ್ ನ ಕೃತ್ಯವನ್ನು ಖಂಡಿಸಿದ್ದು, ವಿಶ್ವದಾದ್ಯಂತ ವೀಕ್ಷಿಸುವ ಗೂಗಲ್ ನಲ್ಲಿ ಕನ್ನಡ ಭಾಷೆಯನ್ನು ಕೊಳಕು ಭಾಷೆ ಎಂದು ಹೇಳಿರುವುದು ತುಂಬಾ ವಿಷಾದನೀಯ. ಕನ್ನಡ ಭಾಷೆ ದೀರ್ಘ ಕಾಲದ ಇತಿಹಾಸ ಉಳ್ಳ ಭವ್ಯ ಪರಂಪರೆಯ ಭಾಷೆ. ಅತಿ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿ ಪಡೆದ ನಮ್ಮ ಹೆಮ್ಮೆಯ ಕನ್ನಡವನ್ನು ಕೊಳಕು ಭಾಷೆ ಎಂದ ಗೂಗಲ್ ತನ್ನ ತಪ್ಪನ್ನು ಸರಿಪಡಿಸಿಕೊಳ್ಳದಿದ್ದರೆ ಕಾನೂನು ಕ್ರಮ ಜರುಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕಾದೀತು. ಒಂದು ವೇಳೆ ಈ ತಪ್ಪನ್ನು ಸರಿಪಡಿಸಿಕೊಂಡರೂ ಗೂಗಲ್ ನ ಸಂಸ್ಥೆಗೆ ಇಂತಹ ಪ್ರಮಾದಕ್ಕಾಗಿ ಕಾನೂನು ನೋಟೀಸ್ ನೀಡುವುದು ಸೂಕ್ತ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ನಮ್ಮ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರವನ್ನು ಕೋರುತ್ತದೆ ಎಂದು ತಿಳಿಸಿದ್ದಾರೆ.