ನವದೆಹಲಿ: ಮಹಾತ್ಮ ಗಾಂಧೀಜಿ ಅವರ ಹೇಳಿಕೆಯನ್ನು ಉಲ್ಲೇಖಿಸಿರುವ ಭಾರತದಲ್ಲಿನ ಲೆಬನಾನ್ ರಾಯಭಾರಿ ರಾಬಿ ನಾರ್ಶ್, ‘ನೀವು ಕ್ರಾಂತಿವಾದಿಯನ್ನು ಕೊಲ್ಲಬಹುದು, ಆದರೆ ಕ್ರಾಂತಿಯನ್ನಲ್ಲ’ ಎಂದು ಇಸ್ರೇಲ್ ಗೆ ತಿರುಗೇಟು ನೀಡಿದ್ದಾರೆ.
ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಉತ್ತರಾಧಿಕಾರಿಯನ್ನು ಕೊಲೆ ಮಾಡಲಾಗಿದೆ ಎಂಬ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿಕೆಗೆ ಪ್ರತಿಯಾಗಿ ಈ ರೀತಿಯಾಗಿ ನುಡಿದಿದ್ದಾರೆ.
‘ನಾನು ಮಹಾತ್ಮ ಗಾಂಧೀಜಿ ಅವರ ಹೇಳಿಕೆಯನ್ನು ನೆನಪಿಸಲು ಬಯಸುತ್ತೇನೆ. ನೀವು ಕ್ರಾಂತಿವಾದಿಯನ್ನು ಕೊಲ್ಲಬಹುದು. ಆದರೆ ಕ್ರಾಂತಿಯನ್ನಲ್ಲ. ನೀವು ಹಿಜ್ಬುಲ್ಲಾ ನಾಯಕರನ್ನು ನಿರ್ಮೂಲನೆ ಮಾಡಬಹುದು. ಆದೆರೆ ಹಿಜ್ಬುಲ್ಲಾವನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಹಿಜ್ಬುಲ್ಲಾ ಅಲ್ಲಿ ನೆಲೆನಿಂತಿರುವ ಜನರಾಗಿದ್ದಾರೆ. ಹಿಜ್ಬುಲ್ಲಾ ಜನರಿಂದ ಬೆಂಬಲಿತ ಕಾನೂನುಬದ್ಧ ರಾಜಕೀಯ ಪಕ್ಷವಾಗಿದೆ. ಪ್ಯಾರಾಚೂಟ್ ನಲ್ಲಿ ಬಂದ ಕಾಲ್ಪನಿಕ ರಚನೆಯಲ್ಲ’ ಎಂದು ಪಿಟಿಐಗೆ ನೀಡಿದ ವಿಡಿಯೊ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಇಸ್ರೇಲ್ ನಿಂದ ಹಿಜ್ಬುಲ್ಲಾವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಅಲ್ಲದೆ ಇಸ್ರೇಲ್ ನ ಕ್ರೂರತೆಯ ವಿರುದ್ಧ ಹಿಜ್ಬುಲ್ಲಾ ಯಶಸ್ಸು ಗಳಿಸಲಿದೆ’ ಎಂದು ಅವರು ಹೇಳಿದ್ದಾರೆ.