ಲೆಬನಾನ್ | ಪೇಜರ್‌ಗಳ ಸ್ಫೋಟದ ಬೆನ್ನಲ್ಲೇ ಕೆಲವು ಉಪಕರಣಗಳ ಸ್ಫೋಟ: ಕನಿಷ್ಠ 9 ಮಂದಿ ಮೃತ

Prasthutha|

ಬೈರೂತ್: ಲೆಬನಾನ್‌ನ ಹಲವೆಡೆ ಪೇಜರ್‌ಗಳು ಸ್ಫೋಟಗೊಂಡ ಮರುದಿನವೇ ವಾಕಿಟಾಕಿ ಸೇರಿದಂತೆ ಕೆಲವು ಎಲೆಕ್ಟ್ರಾನಿಕ್ ಉಪಕರಣಗಳ ಸ್ಫೋಟಗೊಂಡು ಕನಿಷ್ಠ 9 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

- Advertisement -

ಹಿಜ್ಬುಲ್ಲಾ ಸದಸ್ಯರು ಬಳಸುತ್ತಿದ್ದ ನೂರಾರು ಪೇಜರ್‌ಗಳು ಮಂಗಳವಾರ ಸ್ಫೋಟಗೊಂಡ ಬಳಿಕ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 12 ಜನರು ಸಾವಿಗೀಡಾಗಿದ್ದರು. ಸುಮಾರು 2,800 ಜನರು ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ವಾಕಿಟಾಕಿ ಮತ್ತು ಸೋಲಾರ್ ಉಪಕರಣಗಳನ್ನು ಬಳಸಿಕೊಂಡು ಸ್ಫೋಟ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.

ಈ ಸ್ಫೊಟದಲ್ಲಿ 9 ಮಂದಿ ಮೃತಪಟ್ಟು, 300 ಮಂದಿ ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

- Advertisement -

ಹಿಜ್ಬುಲ್ಲಾದ ಮೂವರು ಸದಸ್ಯರ ಅಂತಿಮ ಯಾತ್ರೆ ವೇಳೆ ಹಲವು ಸ್ಫೋಟಗಳು ಸಂಭವಿಸಿವೆ. ದಕ್ಷಿಣ ಕರಾವಳಿ ನಗರವಾದ ಸಿಡಾನ್‌ನಲ್ಲಿ ಕಾರು ಮತ್ತು ಮೊಬೈಲ್ ಫೋನ್ ಅಂಗಡಿಯೊಳಗೆ ಸಾಧನಗಳು ಸ್ಫೋಟಗೊಂಡಿವೆ.

ಗುಂಪೊಂದು ಬಳಸುತ್ತಿದ್ದ ವಾಕಿ ಟಾಕಿಗಳು ಸ್ಫೋಟಗೊಂಡಿವೆ ಎಂದು ಹಿಜ್ಬುಲ್ಲಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೈರೂತ್‌ನ ಹಲವು ಪ್ರದೇಶಗಳಲ್ಲಿ ಮತ್ತು ದಕ್ಷಿಣ ಲೆಬನಾನ್‌ನಲ್ಲಿನ ಮನೆಗಳಲ್ಲಿ ಸೌರಶಕ್ತಿ ಉಪಕರಣಗಳು ಸ್ಫೋಟಗೊಂವೆ ಎಂದು ಲೆಬನಾನ್‌ನ ಅಧಿಕೃತ ಸುದ್ದಿ ಸಂಸ್ಥೆಯ ವರದಿ ತಿಳಿಸಿದೆ.

ಮಂಗಳವಾರದ ಪೇಜರ್ ಬಾಂಬ್ ದಾಳಿಯ ನಂತರ ಹೊಸ ಸ್ಫೋಟಗಳು ಸಂಭವಿಸಿದ್ದು, ಇದು ಹಿಜ್ಬುಲ್ಲಾ ಸದಸ್ಯರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿರುವ ದಾಳಿ ಎಂಬ ಶಂಕೆ ವ್ಯಕ್ತವಾಗಿದೆ.



Join Whatsapp