ಕೇಜ್ರಿವಾಲ್ ಬಂಧನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ‘INDIA’ ನಾಯಕರು

Prasthutha|

ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಸಂಚಾಲಕ ಅರವಿಂದ್ ಕೇಜ್ರಿವಾಲ್ ಬಂಧನಕ್ಕೆ ‘INDIA’ ಕೂಟದ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. INDIA ನಿಮಗೆ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದು ಬಿಜೆಪಿ ವಿರುದ್ಧ ಕಿಡಿಗಾರಿದ್ದಾರೆ.

- Advertisement -

ಹೆದರಿದ ಸರ್ವಾಧಿಕಾರಿ ಸತ್ತ ಪ್ರಜಾಪ್ರಭುತ್ವವನ್ನು ರಚಿಸಲು ಬಯಸುತ್ತಾನೆ. ಮಾಧ್ಯಮ ಸೇರಿದಂತೆ ಎಲ್ಲ ಸಂಸ್ಥೆಗಳನ್ನು ವಶಪಡಿಸಿಕೊಂಡು ಪಕ್ಷ ಒಡೆಯುವುದು, ಸಂಸ್ಥೆಗಳಿಂದ ಹಣ ವಸೂಲಿ, ಪ್ರಮುಖ ವಿರೋಧ ಪಕ್ಷದ ಖಾತೆಯನ್ನು ಸ್ಥಗಿತಗೊಳಿಸುವುದು ಮಾಡಲಾಗಿದೆ. ಇಷ್ಟು ಸಾಕಾಗದೇ ಇದ್ದಾಗ ಇದೀಗ ಚುನಾಯಿತ ಮುಖ್ಯಮಂತ್ರಿಗಳ ಬಂಧನವೂ ನಡೆಯುತ್ತಿದೆ. ಇದಕ್ಕೆ INDIA ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Xನಲ್ಲಿ ಪೋಸ್ಟ್ ಮಾಡಿದ್ದಾರೆ.

ಎನ್‌ಸಿಪಿ ನಾಯಕ ಶರದ್ ಪವಾರ್, ಪ್ರತಿಪಕ್ಷಗಳನ್ನು ಗುರಿಯಾಗಿಸಲು ಕೇಂದ್ರೀಯ ಸಂಸ್ಥೆಗಳ ಪ್ರತೀಕಾರದ ದುರುಪಯೋಗವನ್ನು ನಾನು ಬಲವಾಗಿ ಖಂಡಿಸುತ್ತೇನೆ, ವಿಶೇಷವಾಗಿ ಸಾರ್ವತ್ರಿಕ ಚುನಾವಣೆಗಳು ಸಮೀಪಿಸುತ್ತಿರುವಾಗ ಬಿಜೆಪಿ ಎಷ್ಟರ ಮಟ್ಟಿಗೆ ಅಧಿಕಾರಕ್ಕೆ ಬರಬಹುದು ಎಂಬುದನ್ನು ಈ ಬಂಧನ ತೋರಿಸುತ್ತದೆ. ಅರವಿಂದ್ ಕೇಜ್ರಿವಾಲ್ ವಿರುದ್ಧದ ಈ ಅಸಂವಿಧಾನಿಕ ಕ್ರಮದ ವಿರುದ್ಧ ‘INDIA’ ಒಟ್ಟಾಗಿದೆ ಎಂದು ಎಕ್ಸ್-ನಲ್ಲಿ ಪೋಸ್ಟ್‌ ಮಾಡಿದ್ದಾರೆ.

- Advertisement -

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ X ಪೋಸ್ಟ್ ಮಾಡಿದ್ದು,ಚುನಾವಣೆಯಲ್ಲಿ ಬಿಜೆಪಿಗೆ ಸೋಲಿನ ಭಯ ಶುರುವಾಗಿದೆ. ಈ ಭಯದಿಂದ ಚುನಾವಣೆ ವೇಳೆಗೆ ಯಾವುದೇ ವಿಧಾನದಿಂದ ವಿರೋಧ ಪಕ್ಷದ ನಾಯಕರನ್ನು ಸಾರ್ವಜನಿಕರಿಂದ ದೂರವಿಡಲು ಬಯಸುತ್ತಿದೆ. ಇದಕ್ಕೆ ಬಂಧನವಷ್ಟೇ ಸಬೂಬು. ಈ ಬಂಧನದ ವಿರುದ್ಧ ಜನರು ಹೊಸ ಕ್ರಾಂತಿಗೆ ನಾಂದಿ ಹಾಡಲಿದ್ದಾರೆ ಎಂದು ಬರೆದಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್,2024ರ ಚುನಾವಣೆಯ ಮೊದಲು ಒಂದು ದಶಕದ ವೈಫಲ್ಯಗಳು ಮತ್ತು ಸನ್ನಿಹಿತವಾದ ಸೋಲಿನ ಭಯದಿಂದ ಫ್ಯಾಸಿಸ್ಟ್ ಬಿಜೆಪಿ ಸರ್ಕಾರವು ದೆಹಲಿ ಮುಖ್ಯಮಂತ್ರಿಯನ್ನು ಬಂಧಿಸುವ ಮೂಲಕ ಪಾತಾಳಕ್ಕೆ ಇಳಿದಿದೆ. ಹೇಮಂತ್ ಸೋರೆನ್ ನಂತರ, ಅರವಿಂದ್ ಕೇಜ್ರಿವಾಲ್ ಅನ್ಯಾಯವಾಗಿ ಗುರಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp