ಕೊಟ್ಟಿಗೆಹಾರ: ‘ಕುಟುಂಬದಲ್ಲಿ ಏಕತೆಯಿಂದ ಹಾಗೂ ಸಹಬಾಳ್ವೆಯಿಂದ ಜೀವನ ನಡೆಸಿದರೆ ಉತ್ತಮ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ’ಎಂದು ಉಜಿರೆ ದಯಾಳ್ ಬಾಗ್ ಚರ್ಚಿನ ಧರ್ಮಗುರು ಜೋಯೆಲ್ ಲೋಪೆಸ್ ಹೇಳಿದರು.
ಅವರು ಬಣಕಲ್ ಬಾಲಿಕಾ ಮರಿಯ ಚರ್ಚಿನಲ್ಲಿ ಮಾತೆ ಮರಿಯಮ್ಮನವರ ಹಬ್ಬದ (ಹೊಸಕ್ಕಿ ಹಬ್ಬ)ವಿಶೇಷ ಪೂಜೆ ಅರ್ಪಿಸಿ ಮಾತನಾಡಿದರು.
‘ಪ್ರಕೃತಿ ತಾಯಿಯನ್ನು ನಾವು ಪ್ರೀತಿಸಬೇಕು.ಆಗ ಮಾತ್ರ ಪ್ರಕೃತಿಯಿಂದ ಉತ್ತಮ ಫಲ ನಿರೀಕ್ಷೆ ಸಾಧ್ಯವಾಗುತ್ತದೆ.ಹಾಗೆಯೇ ನಮ್ಮ ತಂದೆ ತಾಯಿಯನ್ನು ಗೌರವಿಸಿ ಪ್ರೀತಿಸಿದರೆ ನಮಗೆ ಸದ್ಗತಿ ಪ್ರಾಪ್ತಿಯಾಗುತ್ತದೆ.ಮಾತೆ ಮರಿಯಮ್ಮನವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿ ಮಾತೆಯನ್ನು ಗೌರವಿಸಿದರೆ ನಮ್ಮ ಕುಟುಂಬವು ಏಕತೆಯಿಂದ ಬಾಳಲು ಸಾಧ್ಯವಾಗುತ್ತದೆ.ಇಂದಿನ ಆಧುನಿಕತೆಯಲ್ಲಿ ಪರಸ್ಪರ ಏಕತೆಯ ಮನೋಭಾವ ದೂರವಾಗುತ್ತಿದೆ.ಇಂತಹ ಸಂಸ್ಕೃತಿ ದೂರವಾಗಬೇಕಾದರೆ ನಾವು ಕುಟುಂಬದಲ್ಲಿ ಪರಸ್ಪರ ಪ್ರೀತಿಯಿಂದ ಬಾಳುವ ಅವಶ್ಯಕತೆಯಿದೆ’ಎಂದರು.
ಬಣಕಲ್, ಬಾಳೂರು,ಕೊಟ್ಟಿಗೆಹಾರ,ಜಾವಳಿ,ಕುಂದೂರು ಮತ್ತಿತರ ಗ್ರಾಮಗಳ ಕ್ರೈಸ್ತರು ಬಣಕಲ್ ಚರ್ಚಿನಲ್ಲಿಯೇ ಸಮಾವೇಶಗೊಂಡು ಏಕತೆಯಿಂದ ಸಹಪಂಕ್ತಿಯಲ್ಲಿ ಕುಳಿತು ಊಟ ಸೇವಿಸುವ ಮೂಲಕ ಮಾತೆ ಮರಿಯಮ್ಮನವರ ಹಬ್ಬವನ್ನು ಈ ಬಾರಿ ಸಂಭ್ರಮದಿಂದ ಆಚರಿಸಿದರು.ವಿವಿಧ ಮನೋರಂಜನೆಗಳು ನಡೆದವು.ನೆರೆದವರಿಗೆ ಧರ್ಮಗುರುಗಳು ಆಶೀರ್ವದಿಸಿದ ಭತ್ತದ ಹೊಸ ತೆನೆ,ಕಬ್ಬು, ಸಿಹಿ ವಿತರಿಸಲಾಯಿತು.ಚರ್ಚಿನ ಸಮುದಾಯ ಭವನದಲ್ಲಿ ಸಾಮೂಹಿಕವಾಗಿ ಆಹಾರ ಸೇವಿಸುವ ಮೂಲಕ ಕುಟುಂಬದ ಏಕತೆಯ ಸಂದೇಶವನ್ನು ಭಕ್ತರಿಗೆ ಸಾರಲಾಯಿತು.ಈ ಸಂದರ್ಭದಲ್ಲಿ ಧರ್ಮಗುರು ಫಾ.ಪ್ರೇಮ್ ಲಾರೆನ್ಸ್ ಡಿಸೋಜ,ಫಾ.ಎಡ್ವಿನ್ ರಾಕೇಶ್ ಡಿಸೋಜ ಇದ್ದರು.
ಕೆಳಗೂರು ಚರ್ಚಿನಲ್ಲಿ ಧರ್ಮಗುರು ಡೇವಿಡ್ ಪ್ರಕಾಶ್ ಹಬ್ಬದ ಪೂಜೆ ನೆರವೇರಿಸಿ ಮಾತನಾಡಿ ‘ಕುಟುಂಬದಲ್ಲಿ ತಾಯಿಗೆ ಮುಖ್ಯ ಸ್ಥಾನ ನೀಡುತ್ತೇವೆ.ಹಾಗೆಯೇ ಏಸು ಕ್ರಿಸ್ತರ ತಾಯಿ ಮಾತೆ ಮರಿಯಮ್ಮನವರು ನಮಗೆ ಉತ್ತಮ ದಾರಿಯಲ್ಲಿ ಸಾಗಲು ಪ್ರೇರೇಪಕರಾಗಿದ್ದಾರೆ.ಅವರ ಮಾರ್ಗದರ್ಶನದಲ್ಲಿ ನಾವು ಪರಸ್ಪರ ಸತ್ಕಾರ್ಯಗಳ ಮೂಲಕ ಸಮಾಜದಲ್ಲಿ ನಡೆದು ಇತರರಿಗೂ ಮಾರ್ಗದರ್ಶನ ನೀಡುವಂತಾಗಬೇಕು’ಎಂದರು.
ಭತ್ತದ ತೆನೆಯನ್ನು ಧರ್ಮಗುರುಗಳು ಆಶೀರ್ವದಿಸಿ ನೆರೆದವರಿಗೆ ಹಂಚಿದರು.ನಂತರ ಸಿಹಿ ನೀಡಲಾಯಿತು.
ಕೂವೆ ಪವಿತ್ರ ಹೃದಯದ ಚರ್ಚಿನಲ್ಲಿ ಧರ್ಮಗುರು ಲ್ಯಾನ್ನಿ ಪಿಂಟೊ ಮರಿಯ ಜಯಂತಿ ಹಬ್ಬದ ಸಂದೇಶ ನೀಡಿದರು. ಪೂಜೆಯ ನಂತರ ಸಿಹಿ ವಿತರಿಸಲಾಯಿತು.ವಿವಿಧ ಚರ್ಚುಗಳಲ್ಲಿ ಮಾತೆ ಮರಿಯಮ್ಮನವರಿಗೆ ಹೂ ಸಮರ್ಪಿಸುವ ಮೂಲಕ ಗೌರವ ನೀಡಿ ಹಬ್ಬವನ್ನು ಸಂಭ್ರಮಿಸಲಾಯಿತು.ಪೂಜೆಯ ಮುನ್ನ ಮೆರವಣಿಗೆಯನ್ನು ನಡೆಸಲಾಯಿತು.