ನೆಹರು ಒಲೇಕರ್ ವಜಾಗೊಳಿಸುವಂತೆ ವಕೀಲರ ಒಕ್ಕೂಟದಿಂದ ಪ್ರತಿಭಟನೆ

Prasthutha|

ಬೆಂಗಳೂರು: ಎಸ್ಸಿ – ಎಸ್ಟಿ ಆಯೋಗದಲ್ಲಿ ಆಯೋಗದ ಅಧ್ಯಕ್ಷ ನೆಹರೂ ಒಲೇಕರ್ ಹಾಗೂ ಅವರ ತಂಡ ಸಿಬ್ಬಂದಿ ವರ್ಗಾವಣೆ ಹಾಗೂ ಮತ್ತಿತರೆ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಕೀಲರ ಒಕ್ಕೂಟ ಆಯೋಗದ ಕಚೇರಿ ಮುಂದೆ ಇಂದು ಪ್ರತಿಭಟನೆ ನಡೆಸಿತು.

- Advertisement -


ಒಲೇಕರ್ ಮತ್ತವರ ತಂಡ ಪರಿಶಿಷ್ಟ ಸಮುದಾಯದ ಹಿತಾಸಕ್ತಿಯನ್ನು ಕಡೆಗಣಿಸಿ ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದೆ. ಹೀಗಾಗಿ ಇವರನ್ನು ಅಧ್ಯಕ್ಷ ಸ್ಥಾನದಿಂದ ಕೂಡಲೇ ವಜಾಗೊಳಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ವಕೀಲರ ಒಕ್ಕೂಟದ ಅಧ್ಯಕ್ಷ ಎಸ್.ಬಿ.ಸುರೇಶ್ ಮಾತನಾಡಿ, ಪರಿಶಿಷ್ಟ ಜಾತಿ, ಪಂಗಡಗಳ ಹಿತಾಸಕ್ತಿ ಕಾಪಾಡುವುದು ಆಯೋಗದ ಪರಮ ಗುರಿಯಾಗಿದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಮೇಲ್ಜಾತಿ ಜನಾಂಗದವರಿಂದ ನಡೆಯುವ ದೌರ್ಜನ್ಯ , ಆಸ್ತಿ ಪಾಸ್ತಿ ನಾಶ ಇತರೆ ಎಲ್ಲಾ ವಿಧವಾದ ಅನ್ಯಾಯಗಳನ್ನು ಸರಿಪಡಿಸಲು ಹಾಗೂ ರಕ್ಷಣೆ ನೀಡುವುದು ಆಯೋಗದ ಕರ್ತವ್ಯವಾಗಿದೆ. ಆದರೆ ಆಯೋಗ ತನ್ನ ಮೂಲ ಉದ್ದೇಶವನ್ನು ಮರೆತು ಅಕ್ರಮಗಳಲ್ಲಿ ತೊಡಗಿದೆ ಎಂದರು.


ಕೆಳ ಸಮುದಾಯಗಳಿಗೆ ನ್ಯಾಯ ಸಿಗದೇ ನಿರ್ಲಕ್ಷ್ಯತೆ ವಹಿಸಿದಾಗ ಅಂತಹ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸಲು ಆಯೋಗಕ್ಕೆ ಅಧಿಕಾರವಿದೆ. ಸರ್ಕಾರಕ್ಕೆ ವರದಿ ನೀಡಿ ಶಿಕ್ಷೆಗೆ ಗುರುಪಡಿಸುವ ಅಧಿಕಾರವೂ ಇದೆ. ಈ ಆಯೋಗವು ಸಿವಿಲ್ ನ್ಯಾಯಾಲಯ ಸ್ವರೂಪದ ಶಾಸನಾತ್ಮಕ ಅಧಿಕಾರ ಹೊಂದಿದೆ. ಆದರೆ , ಸರ್ಕಾರ ತಳ ಸಮುದಾಯಗಳನ್ನು ತುಳಿಯುವ ದುರುದ್ದೇಶದಿಂದ ರಾಜಕೀಯ ವ್ಯಕ್ತಿಗಳನ್ನು ಆಯೋಗದ ಅಧ್ಯಕ್ಷರನ್ನಾಗಿ ಮಾಡುತ್ತಿರುವುದು ಅತಿ ದೊಡ್ಡ ದುರಂತವಾಗಿದೆ ಎಂದು ಅವರು ವಿಷಾದಿಸಿದರು.

- Advertisement -


ಒಕ್ಕೂಟದ ಗೌರವಾಧ್ಯಕ್ಷ ಎಂ.ಮುನಿಯಪ್ಪ ಮಾತನಾಡಿ, ರಾಜಕಾರಣಿಗಳಿಗೆ ಆಯೋಗ ಗಂಜಿ ಕೇಂದ್ರವಾಗಿ ಪರಿವರ್ತನೆಯಾಗಿದೆ. ಎಸ್ಸಿ – ಎಸ್ಟಿ ಸಮುದಾಯಗಳಿಗೆ ನ್ಯಾಯ ನೀಡುತ್ತಿಲ್ಲ. ಬರೀ ಅನ್ಯಾಯವನ್ನೇ ಮಾಡುತ್ತಿದೆ ಎಂದು ಆರೋಪಿಸಿದರು.
ಮೊದಲು ಭ್ರಷ್ಟಾಚಾರದಲ್ಲಿ ತೊಡಗಿರುವ ಅಧ್ಯಕ್ಷರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು , ಸಂಧಾನ ನೆಪದಲ್ಲಿ ಕೆಲವು ಪ್ರಕರಣಗಳನ್ನು ವಿನಾಕಾರಣ ಮುಕ್ತಾಯಗೊಳಿಸಿದ್ದು, ಈ ಬಗ್ಗೆಯೂ ತನಿಖೆಯಾಗಬೇಕು , ಆಯೋಗಕ್ಕೆ ನುರಿತ ವೃತ್ತಿಪರ ವಕೀಲರನ್ನು ನೇಮಿಸಬೇಕು ಎಂದರು.


ಪ್ರತಿಭಟನೆಯಲ್ಲಿ ಗೌರವಧ್ಯಕ್ಷ ಭಕ್ತವತ್ಸಲ, ಪ್ರಧಾನ ಕಾರ್ಯದರ್ಶಿ ಆರ್ . ತಿಪ್ಪೇಸ್ವಾಮಿ, ಮುತ್ಯಾಲಪ್ಪ, ಚಿಕ್ಕ ತಿಮ್ಮರಾಯಪ್ಪ, ಅಖಿಲ ಭಾರತ ಅಂಬೇಡ್ಕರ್ ಅಲ್ಪಸಂಖ್ಯಾತರ ವಾಲ್ಮೀಕಿ ಪ್ರಜಾ ಸಮಿತಿ ಮುಖಂಡ ಪ್ರಕಾಶ್ ಬಾಬು. ಕೆ,ಮಹಿಳಾ ಘಟಕದ ರಾಷ್ಟ್ರೀಯ ಅಧ್ಯಕ್ಷರಾದ ಜಿ.ಎನ್. ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು

Join Whatsapp