ಕಾನೂನು ಎಲ್ಲರಿಗೂ ಒಂದೇ, ಈಶ್ವರಪ್ಪನವರಿಗೆ ಬೇರೆ ಸಾಧ್ಯವಿಲ್ಲ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಬಿಜೆಪಿ ಭ್ರಷ್ಟ ಸರ್ಕಾರ, 40% ಕಮಿಷನ್ ಸರ್ಕಾರ ಎಂದು ಕಾಂಗ್ರೆಸ್ ಅಭಿಯಾನ ಆರಂಭಿಸುತ್ತಿದೆ. ಈ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಜನರ ರಕ್ತ ಹೀರುವ ಕೆಲಸ ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

- Advertisement -

ಕಾಂಗ್ರೆಸ್ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಸಂತೋಷ್ ಪಾಟೀಲ್ ಎಂಬ ಬಿಜೆಪಿ ಕಾರ್ಯಕರ್ತ ಹಾಗೂ ಗುತ್ತಿಗೆದಾರ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಕೆಲಸ ಮಾಡಿ, 40% ಕಮಿಷನ್ ನೀಡದ ಕಾರಣ ಆತನ ಬಿಲ್ ಪಾಸ್ ಆಗಲಿಲ್ಲ. ಹಲವು ಬಾರಿ ಸಚಿವರಾಗಿದ್ದ ಈಶ್ವರಪ್ಪ ಅವರನ್ನು ಭೇಟಿ ಮಾಡಿದಾಗ ಕಮಿಷನ್ ನೀಡದಿದ್ದರೆ ಬಿಲ್ ಪಾಸಾಗಲ್ಲ ಎಂದು ಹೇಳಿದಾಗ ಕಷ್ಟ ತಾಳಲಾರದೇ ಜಿಗುಪ್ಸೆಗೊಂಡು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಅವರು ಮಾಹಿತಿ ನೀಡಿದರು.

ಈ ವಿಚಾರ ಅಧಿವೇಶನದಲ್ಲಿ ಎತ್ತಿ, ಈಶ್ವರಪ್ಪನವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರು ರಾಜೀನಾಮೆ ನೀಡಬೇಕು ಎಂದು ನಾವು ಆಗ್ರಹಿಸಿದ್ದೆವು. ಈಶ್ವರಪ್ಪನವರು ರಾಜೀನಾಮೆ ಕೊಟ್ಟರೂ ಅವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಿಲ್ಲ. ಕಾನೂನು ಎಲ್ಲರಿಗೂ ಒಂದೇ, ಈಶ್ವರಪ್ಪನವರಿಗೆ ಬೇರೆ ಕಾನೂನು ಇರಲು ಸಾಧ್ಯವಿಲ್ಲ. ಈ ಪ್ರಕರಣ ತನಿಖೆ ಮಾಡಿಸುವುದಾಗಿ ಸರ್ಕಾರ ಬಿ ರಿಪೋರ್ಟ್ ಸಲ್ಲಿಸಿದೆ. ಪೊಲೀಸ್ ತನಿಖೆಯಿಂದ ನ್ಯಾಯ ಸಿಗುವುದಿಲ್ಲ, ನ್ಯಾಯಾಂಗ ತನಿಖೆಯಿಂದ ನ್ಯಾಯ ಸಿಗುತ್ತದೆ ಎಂದು ಆಗ್ರಹಿಸಿದ್ದೆವು. ಆದರೆ ಸರ್ಕಾರ ಒಪ್ಪಲಿಲ್ಲ. ಸರ್ಕಾರ ಬಿ ರಿಪೋರ್ಟ್ ಸಲ್ಲಿಸಿದ ನಂತರ ಸಂತೋಷ್ ಪಾಟೀಲ್ ಪತ್ನಿ ರಾಜ್ಯಪಾಲರಿಗೆ ಪತ್ರ ಬರೆದು ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

- Advertisement -

ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಕಮಿಷನ್ ವಿಚಾರವಾಗಿ ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಇನ್ನು ಈ ಸರ್ಕಾರ ಮಠಗಳಿಗೆ ನೀಡುವ ಹಣದಲ್ಲಿ 30% ಕಮಿಷನ್, ಬಿಬಿಎಂಪಿಯಲ್ಲಿ 50% ಕಮಿಷನ್, ಸರ್ಕಾರಿ ಹುದ್ದೆಗಳಿಗೆ ದರ ನಿಗದಿ ಮಾಡಿದ್ದಾರೆ. ಮೋದಿ ಅವರು ನಾ ಖಾವೂಂಗಾ ನಾ ಖಾನೇದೂಂಗ ಎನ್ನುತ್ತಾರೆ. ಆದರೆ ಈ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನೇಕರು ಈ ಸರ್ಕಾರದ ಭ್ರಷ್ಟಾಚಾರ ಹೇಳಲು ಹಿಂಜರಿಯುತ್ತಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಹಾಯವಾಣಿ ಆರಂಭಿಸಿದ್ದೇವೆ. ಜನರು ನಮ್ಮ ಸಹಾಯವಾಣಿ ನಂಬರ್ 844 770 40 40ಗೆ ಕರೆ, ವಾಟ್ಸಪ್ ಮೂಲಕ ತಿಳಿಸಬಹುದಾಗಿದೆ. www.40percentsarkaara.com ವೆಬ್ ಸೈಟ್ ನಲ್ಲಿಯೂ ತಿಳಿಸಬಹುದು ಎಂದು ತಿಳಿಸಿದರು.

ಜನರಲ್ಲಿ ಈ ಭ್ರಷ್ಟಾಚಾರದ ವಿರುದ್ದ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತೇವೆ. ಈ ಭ್ರಷ್ಟಾಚಾರದಿಂದ ಎಲ್ಲರೂ ತತ್ತರಿಸಿದ್ದು, ರಾಜ್ಯವನ್ನು ಹಾಗೂ ಜನರನ್ನು ಇದರಿಂದ ಮುಕ್ತಗೊಳಿಸಬೇಕಿದೆ. ಹೀಗಾಗಿ ಈ ಅಭಿಯಾನ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.



Join Whatsapp