ಟಿವಿ ಡಿಬೇಟ್ ನಲ್ಲಿ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಳ್ಳಾಲ್ ಗೆ ಬಹಿರಂಗ ಬೆದರಿಕೆ: ಪೊಲೀಸ್ ಆಯುಕ್ತರಿಗೆ ದೂರು

Prasthutha|

ಬೆಂಗಳೂರು: ಸ್ಥಳೀಯ ಟಿವಿ ಚಾನೆಲ್ ಒಂದರ ಡಿಬೇಟ್ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಳ್ಳಾಲ್ ಅವರಿಗೆ ಬಹಿರಂಗವಾಗಿ ಹಲ್ಲೆ ನಡೆಸುವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

- Advertisement -

ಯುವ ಕಾಂಗ್ರೆಸ್ ಮುಖಂಡ ರಾಕೇಶ್ ರಾಮಯ್ಯ, ಮಹಿಳಾ ಕಾಂಗ್ರೆಸ್ ಮುಖಂಡರ ನೇತೃತ್ವದ ನಿಯೋಗ ಸೋಮವಾರ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಭೇಟಿ ಮಾಡಿ ದೂರು ನೀಡಿತು. ದೂರು ಸ್ವೀಕರಿಸಿದ ಆಯುಕ್ತರು ಮುಂದಿನ ಕ್ರಮಕ್ಕೆ ಅಧೀನ ಅಧಿಕಾರಿಗಳಿಗೆ ಕಳುಹಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ಮಂಗಳೂರು ಮೂಲದ ಸುದ್ದಿ ವಾಹಿನಿಯೊಂದು ಸುರತ್ಕಲ್ ನಲ್ಲಿ ನಡೆದ ಇತ್ತೀಚೆಗೆ ನಡೆದ ನೈತಿಕ ಪೊಲೀಸ್ ಗಿರಿ ಪ್ರಕರಣದ ಕುರಿತು “ದಾದಾಗಿರಿ” ಎಂಬ ವಿಷಯದ ಮೇಲೆ ಪ್ಯಾನೆಲ್ ಚರ್ಚೆ ಆಯೋಜಿಸಿತ್ತು. ಡಿಬೇಟ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಸಂದೀಪ್ ಎನ್ನುವ ವ್ಯಕ್ತಿ ಲಾವಣ್ಯ ಬಳ್ಳಾಲ್ ಅವರಿಗೆ “ರಸ್ತೆಗೆ ಬನ್ನಿ ನಿಮಗೂ ಹೊಡೆಯುತ್ತೇವೆ” ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾನೆ. ಈ ಕುರಿತ ವೀಡಿಯೋ ವೈರಲ್ ಆಗಿತ್ತು.

- Advertisement -

ಬೆಂಗಳೂರಿನಲ್ಲಿದ್ದ ಲಾವಣ್ಯ ಅವರು ಮೊಬೈಲ್ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿ, ತಮಗೆ ಬಹಿರಂಗವಾಗಿ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Join Whatsapp