ನವದೆಹಲಿ: ದೇಶದ 19 ರಾಜ್ಯಗಳಲ್ಲಿ ಸಕ್ರೀಯ ಕೋವಿಡ್-19 ಪ್ರಕರಣಗಳ ಸಂಖ್ಯೆ 10 ಸಾವಿರ ದಾಟಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. 300ಕ್ಕೂ ಅಧಿಕ ಜಿಲ್ಲೆಗಳಲ್ಲಿ ‘ಪಾಸಿಟಿವ್ ಪ್ರಕರಣ’ಗಳ ಸಂಖ್ಯೆ ಶೆ.5ರಷ್ಟು ಏರಿಕೆಯಾಗುತ್ತಿದೆ ಎಂದು ಕೋವಿಡ್-19 ಪ್ರಕರಣಗಳ ಪ್ರಸಕ್ತ ಸನ್ನಿವೇಶವನ್ನು ವಿವರಿಸಲು ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
19 ರಾಜ್ಯಗಳ ಕೋವಿಡ್-19 ಪ್ರಕರಣಗಳ ಸಂಖ್ಯೆಯನ್ನು ಒದಗಿಸಲಾಗಿದ್ದು, ಸಕ್ರೀಯ ಪ್ರಕರಣಗಳು ಹೆಚ್ಚಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರ ಮೊದಲನೇ ಸ್ಥಾನದಲ್ಲಿದ್ದು, ಕರ್ನಾಟಕ 5ನೇ ಸ್ಥಾನದಲ್ಲಿದೆ. ಡಿಸೆಂಬರ್ 30ರ ವೇಳೆಗೆ ಶೇ.1.1ರಷ್ಟಿದ್ದ ‘ಪಾಸಿಟಿವ್ ಪ್ರಕರಣ’ಗಳ ಸಂಖ್ಯೆ ಜನವರಿ 12ರವೇಳೆಗೆ ಶೇ.11.05ರಷ್ಟು ಏರಿಕೆಯಾಗಿದೆ. ವಿಶ್ವದಾದ್ಯಂತ ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗುತ್ತಿದ್ದು, ಜನವರಿ 10ರಂದು 31.59 ಲಕ್ಷ ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿದೆ ಎಂದು ಅಗರ್ವಾಲ್ ಹೇಳಿದ್ದಾರೆ.
ಭಾರತದಲ್ಲಿ ಕಳೆದ 211 ದಿನಗಳಲ್ಲಿ 9,55,319 ಸಕ್ರೀಯ ಪ್ರಕರಣಗಳು ಪತ್ತೆಯಾಗಿದ್ದು, ಇವರಲ್ಲಿ 4,84,655 ಮಂದಿ ಮೃತಪಟ್ಟಿದ್ದಾರೆ. 4,868 ಮಂದಿ ಒಮಿಕ್ರಾನ್’ಗೆ ತುತ್ತಾಗಿದ್ದು, ಇವರಲ್ಲಿ 1,805 ಮಂದಿ ಗುಣಮುಖರಾಗಿದ್ದಾರೆ. ಜನವರಿ 12 ರವರೆಗೂ ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಅಂದರೆ ಒಟ್ಟು 2,25,199 ಪ್ರಕರಣ ಪತ್ತೆಯಾಗಿದೆ. ಎರಡನೇ ಸ್ಥಾನದಲ್ಲಿರುವ ಪಶ್ಚಿಮ ಬಂಗಾಳದಲ್ಲಿ 1,02,236 ಪ್ರಕರಣ ಹಾಗೂ ಮೂರನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ 75, 083 ಪ್ರಕರಣಗಳು ಪತ್ತೆಯಾಗಿವೆ. ಕೇಂದ್ರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದ್ದು, ರಾಜ್ಯದಲ್ಲಿ 73, 289 ಸಕ್ರೀಯ ಪ್ರಕರಣಗಳಿವೆ. 4ನೇ ಸ್ಥಾನದಲ್ಲಿ ದೆಹಲಿ, ಕೇರಳ-6, ಉತ್ತರಪ್ರದೇಶ-7, ಗುಜರಾತ್-8, ರಾಜಸ್ಥಾನ-9 ಹಾಗೂ ಉತ್ತರಾಖಂಡ 10ನೇ ಸ್ಥಾನದಲ್ಲಿದೆ.