ಮಂಡ್ಯ: ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ಬಿಡುಗಡೆಯಾಗುವ ನೀರಿನ ಪ್ರಮಾಣ ದಿನೇ ದಿನೇ ಹೆಚ್ಚಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಹರಿಸುತ್ತಿದ್ದಾರೆ.
ಕೆಆರ್‌ಎಸ್ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಲಾಗುತ್ತಿದೆ. ಬುಧವಾರ ಕೆಆರ್‌ಎಸ್‌ನಿಂದ 9,136 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಲಾಗಿತ್ತು, ಗುರುವಾರ (ಆ.17) 13,473 ಕ್ಯೂಸೆಕ್ ಹರಿಸಲಾಗುತ್ತಿದೆ. ಒಂದೇ ದಿನಕ್ಕೆ 4,337 ಕ್ಯೂಸೆಕ್ ನೀರು ಹೆಚ್ಚುವರಿ ಹರಿಸಲಾಗಿದೆ.
ಭಾನುವಾರ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ 5,238 ಕ್ಯೂಸೆಕ್ ನೀರು ಬಿಡುಗಡೆಯಾದರೆ, ಸೋಮವಾರ 5,243 ಕ್ಯೂಸೆಕ್ ನೀರು ಬಿಡುಗಡೆಯಾಗಿದೆ. ಮಂಗಳವಾರ 8,590 ಕ್ಯೂಸೆಕ್ ನೀರು, ಬುಧವಾರ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ 9,136 ಕ್ಯೂಸೆಕ್ ನೀರು ಬಿಡುಗಡೆಯಾಗಿತ್ತು . ಗುರುವಾರವಾದ ಇಂದು 13,473 ಕ್ಯೂಸೆಕ್ ನೀರು ಹರಿಸಲಾಗುತ್ತಿದೆ.
ಕೆಆರ್‌ಎಸ್‌ನಿಂದ ರಾಜ್ಯಕ್ಕೆ ನೀರು ಬಿಡುಗಡೆಗಾಗಿ ತಮಿಳುನಾಡು ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಆದರೆ ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ಕೆಆರ್‌ಎಸ್ ಡ್ಯಾಂನಿಂದ ತಮಿಳುನಾಡಿಗೆ ದಿನೇ ದಿನೇ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗುತ್ತಿದೆ. ತಮಿಳುನಾಡಿಗೆ ಹೆಚ್ಚಿನ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ನಿರ್ಧಾರದ ವಿರುದ್ಧ ರೈತ ಸಂಘ ಪ್ರತಿಭಟನೆಗೆ ಮುಂದಾಗಿದೆ. ಕೆಆರ್‌ಎಸ್ ಮುಖ್ಯದ್ವಾರದ ಬಳಿಯೇ ಪ್ರತಿಭಟನೆ ಹಮ್ಮಿಕೊಂಡಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.