ಶಿರಾಡಿಯಲ್ಲಿ ಭೂ ಕುಸಿತ: ಮತ್ತೆ ಬೆಂಗಳೂರು-ಮಂಗಳೂರು ಹೆದ್ದಾರಿ ಸಂಚಾರ ಬಂದ್ ಭೀತಿ

Prasthutha|

ಹಾಸನ: ಜಿಲ್ಲೆಯ ಹಲವು ಕಡೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಹಾಸನ ನಗರದಲ್ಲಿ ಬೆಳಗ್ಗೆಯಿಂದ ಕೊಂಚ ಬಿಡುವು ನೀಡಿದ್ದರೆ, ಮಲೆನಾಡು ಭಾಗದ ತಾಲೂಕುಗಳಾದ ಸಕಲೇಶಪುರ, ಆಲೂರು, ಬೇಲೂರು, ಅರಕಲಗಲೂಡು ತಾಲೂಕುಗಳಲ್ಲಿ ವರ್ಷಧಾರೆ ಕಡಿಮೆಯಾಗಿಲ್ಲ. ಶನಿವಾರ ರಾತ್ರಿಯಿಂದಲೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಇದರಿಂದ ಬೆಳೆನಷ್ಟದ ಜೊತೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

- Advertisement -

ಮತ್ತೆ ಭೂ ಕುಸಿತ ಭೀತಿ:

ಆತಂಕದ ವಿಷಯ ಎಂದರೆ ನಿರಂತರ ಮಳೆಯಿಂದ ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತ ಶುರುವಾಗಿದೆ. ಸಕಲೇಶಪುರ ತಾಲೂಕಿನ ದೋಣಿಗಾಲ್ ಬಳಿ ರಾಷ್ಟ್ರೀಯ ಹೆದ್ದಾರಿಯ ಒಂದು ಬದಿ ಭಾಗಶಃ ಕುಸಿದಿರುವುದು ಸಹಜವಾಗಿಯೇ ಆತಂಕ ತರಿಸಿದೆ.

- Advertisement -

ಕಳೆದ ವರ್ಷ ಕೂಡ ಇದೇ ಸ್ಥಳದಲ್ಲಿ ಭೂ ಕುಸಿತವಾಗಿ ಸುಮಾರು ಒಂದು ತಿಂಗಳ ಕಾಲ ಶಿರಾಡಿ ಸಂಚಾರ ಬಂದ್ ಆಗಿತ್ತು. ಈಗ ಮತ್ತೆ ಅದೇ ಜಾಗದಲ್ಲಿ ಭೂಮಿ ಜಾರಿರುವುದು ರಸ್ತೆ ಬಂದ್ ಆಗುತ್ತಾ ಎಂಬ ಆತಂಕ ಹುಟ್ಟು ಹಾಕಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿರುವ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಸುತ್ತಿರುವ ಕಂಪನಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಎನ್‌ಎಚ್‌ ಎಐ ಅಧಿಕಾರಿಗಳು ಮತ್ತಷ್ಟು ಭೂ ಕುಸಿತ ಆಗದಂತೆ ತಡೆಯಲು ಮರಳು ಚೀಲ ಜೋಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಆದರೆ ಮಳೆ ಪ್ರಮಾಣ ಹೆಚ್ಚಾದರೆ ರಸ್ತೆ ಮತ್ತಷ್ಟು ಕುಸಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಹೀಗಾದರೆ ಸಂಚಾರ ಮತ್ತಷ್ಟು ದುಸ್ತರವಾಗಲಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ವಾಹನ ಸಂಚಾರ ದಟ್ಟಣೆ ಆಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

ಬೆಂಗಳೂರು-ಮಂಗಳೂರು ನಡುವಿನ ಪ್ರಮುಖ ಮಾರ್ಗವಾಗಿರುವ ಶಿರಾಡಿಘಾಟ್‌ನಲ್ಲಿ ನಿತ್ಯ ಬೃಹತ್ ವಾಹನ ಸೇರಿದಂತೆ ಐದಾರು ಸಾವಿರ ವಾಹನಗಳು ಈ ಮಾರ್ಗದಲ್ಲಿ ಓಡಾಡುತ್ತಿದ್ದು, ಈ ವರ್ಷವೂ ಬಂದ್ ಆಗುವ ಆತಂಕ ಈಗಿನಿಂದಲೇ ನಿರ್ಮಾಣವಾಗಿದೆ.

ಮನೆಗಳಿಗೆ ಹಾನಿ: ಇನ್ನು ಅರಕಲಗೂಡು ತಾಲೂಕಿನಲ್ಲೂ ಕಳೆದ ಒಂದು ವಾರದಿಂದ ಮಳೆ ಅಬ್ಬರಿಸುತ್ತಿರುವುದರಿಂದ ಒಂದೆಡೆ ಬೆಳೆನಷ್ಟ, ಮತ್ತೊಂದೆಡೆ ಹತ್ತಾರು ಮನೆಗಳಿಗೆ ಕುಸಿಯುವ ಭೀತಿ ಎದುರಾಗಿದೆ. ಭಾರೀ ಮಳೆಗೆ ಹಲವು ಮನೆಗಳು ಕುಸಿದಿದ್ದು, ಕೆಲವು ಮನೆಗಳಿಗೆ ಭಾಗಶಃ ಹಾನಿಯಾಗಿದೆ. ತಾಲೂಕಿನ, ರಾಮನಾಥಪುರ ಹೋಬಳಿಯಲ್ಲಿ ಹದಿನೈದಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿವೆ. ಮರವಳಲು, ಮಲ್ಲಿರಾಜಪಟ್ಟಣ ಗ್ರಾಮಗಳ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅದೃಷ್ಟವಶಾತ್ ಅಪಾಯದಿಂದ ಜನರು ಪಾರಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಕಂದಾಯ ನಿರೀಕ್ಷಕ ಸಿ.ಸ್ವಾಮಿ ಹಾಗೂ ಇತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

 ಲಾರಿ ಮೇಲೆ ಉರುಳಿದ ಮರ

ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಲಾರಿ ಮೇಲೆ ಭಾರೀ ಗಾತ್ರದ ಮರ ಉರುಳಿಬಿದ್ದಿದೆ. ಶನಿವಾರ ನಡು ರಾತ್ರಿ ಚಲಿಸುತ್ತಿದ್ದ ಲಾರಿ ಮೇಲೆ ಏಕಾಏಕಿ ಬೃಹತ್ ಮರ ಮುರಿದು ಬಿದ್ದಿದೆ. ಲಾರಿ ಭಾಗಶಃ ಜಖಂ ಆಗಿರುವುದು ಬಿಟ್ಟರೆ, ಬೇರೆ ಯಾವುದೇ ಅನಾಹುತ ಸಂಭವಿಸಿಲ್ಲ. ಮರ ಬಿದ್ದಿದ್ದರಿಂದ ಸುಮಾರು 3 ಗಂಟೆಗೂ ಅಧಿಕ ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಸುದ್ದಿ ತಿಳಿದ ಕೂಡಲೇ ಕಂದಾಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ರಾತ್ರಿಯೇ ಮರ ಕಡಿದು ಸ್ಥಳಾಂತರ ಮಾಡಿದರು. ನಿರಂತರ ಕಾರ್ಯಾಚರಣೆ ನಡೆಸಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Join Whatsapp