ನವದೆಹಲಿ: ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಜೊತೆಗಿದ್ದ ಬೆಂಬಲಿಗನನ್ನು ವೇದಿಕೆಯಿಂದ ತಳ್ಳಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವರಿಂದ ಖಂಡನೆ ವ್ಯಕ್ತವಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಪಾಟಲೀಪುತ್ರ ಕ್ಷೇತ್ರದಿಂದ ಕಣಕ್ಕಿಳಿಸಿರುವ ಸಹೋದರಿ ಮೀಸಾ ಭಾರತಿ ಪರ ಪ್ರಚಾರಕ್ಕೆಂದು ಆಗಮಿಸಿದ್ದ ತೇಜ್ ಪ್ರತಾಪ್ ಯಾದವ್ ಜೊತೆಗಿದ್ದ ಬೆಂಬಲಿಗನನ್ನು ವೇದಿಕೆಯಿಂದ ತಳ್ಳುವ ಮೂಲಕ ಮತ್ತೆ ವಿವಾದಕ್ಕೀಡಾಗಿದ್ದಾರೆ.
ನಾಮಪತ್ರ ಸಲ್ಲಿಸಿದ್ದ ಮೀಸಾ ಭಾರತಿ ತಮ್ಮ ಸಹೋದರ ತೇಜ್ ಪ್ರತಾಪ್ ಜೊತೆಗೆ ವೇದಿಕೆಗೆ ಆಗಮಿಸಿದ್ದರು. ಈ ವೇಳೆ ಹಸಿರು ಕ್ಯಾಪ್ ಧರಿಸಿದ ಅನೇಕ ಕಾರ್ಯಕರ್ತರು ಅವರನ್ನು ಸುತ್ತುವರಿದರು. ಆಗ ಕೋಪಗೊಂಡ ತೇಜ್ ಪ್ರತಾಪ್ ಯಾದವ್, ತನ್ನ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯನ್ನು ತಳ್ಳಿ ಬೀಳಿಸಿದ್ದಾರೆ. ತಕ್ಷಣ ಅಲ್ಲಿದ್ದ ಜನ ಆತನನ್ನು ವೇದಿಕೆಯಿಂದ ಕರೆದೊಯ್ದಿದ್ದಾರೆ. ಪಕ್ಕದಲ್ಲೇ ಇದ್ದ ಮೀಸಾ , ತೇಜ್ ಪ್ರತಾಪ್‌ನನ್ನು ಸಮಾಧಾನಪಡಿಸಿದ್ದು ವೀಡಿಯೊದಲ್ಲಿಕಾಣುತ್ತದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ತೇಜ್ ಪ್ರತಾಪ್ ವರ್ತನೆಗೆ ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಪ್ರೀತಿ ಗಾಂಧಿ, ತೇಜ್ ಪ್ರತಾಪ್ ಯಾವುದಕ್ಕೂ ಅರ್ಹನಲ್ಲ. ಸ್ವಪಕ್ಷ ಕಾರ್ಯಕರ್ತನ ಮೇಲೆಯೇ ಬಹಳ ಕ್ರೂರವಾಗಿ ಹಲ್ಲೆ ಮಾಡುತ್ತಾರೆ. ಇದು ಮಾತು ಮತ್ತು ಕೃತಿಗಿರುವ ವ್ಯತ್ಯಾಸ ಎಂದು ಪ್ರತಿಕ್ರಿಯಿಸಿದ್ದಾರೆ.