ಪಾಟ್ನಾ: ಲೋಕಸಭೆ ಚುನಾವಣೆಗೆ ರಾಷ್ಟ್ರೀಯ ಜನತಾ ದಳ(ಆರ್ಜೆಡಿ) 22 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಸರನ್ನಿಂದ ಮತ್ತು ಮಿಸಾ ಭಾರತಿ ಪಾಟಲಿಪುತ್ರ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದಾರೆ.
ಡಿಸೆಂಬರ್ 2022 ರಲ್ಲಿ ಸಿಂಗಾಪುರ ಮೂಲದ ಆಸ್ಪತ್ರೆಯಲ್ಲಿ ಲಾಲು ಪ್ರಸಾದ್ ಯಾದವ್ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾದಾಗ ರೋಹಿಣಿ ತನ್ನ ಒಂದು ಮೂತ್ರಪಿಂಡವನ್ನು ತನ್ನ ತಂದೆಗೆ ದಾನ ಮಾಡಿದ್ದರು.ಈ ತಿಂಗಳ ಆರಂಭದಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ವಿರೋಧ ಪಕ್ಷದ ಜನ ವಿಶ್ವಾಸ ರ್ಯಾಲಿಯಲ್ಲಿ ರೋಹಿಣಿ ತನ್ನ ತಂದೆಯೊಂದಿಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಲಾಲು ಪುತ್ರಿ ಮಿಸಾ ಭಾರತಿ ಈ ಹಿಂದೆ ಆರ್ಜೆಡಿ ಪ್ರತಿನಿಧಿಸಿ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದರು. ಮಿಸಾ ಅವರು ಪಾಟಲಿಪುತ್ರದಿಂದ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು, ಆದರೆ ಅವರು ಎರಡೂ ಸಂದರ್ಭಗಳಲ್ಲಿ ಸೋಲು ಕಂಡಿದ್ದರು.