ತಿರುವನಂತಪುರಂ: ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ದ್ವೀಪ ಸಮೂಹಕ್ಕೆ ಆಗಮಿಸುತ್ತಿದ್ದಂತೆ ನೂರಾರು ಲಕ್ಷದ್ವೀಪದ ನಿವಾಸಿಗಳು ಸೋಮವಾರ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.
ಲಕ್ಷದ್ವೀಪದಲ್ಲಿ ಅಭಿವೃದ್ಧಿಯ ನೆಪದಲ್ಲಿ ವಿವಾದಾತ್ಮಕ ಕಾನೂನುಗಳನ್ನು ಜಾರಿಗೆ ತಂದ ನಂತರ ಇದೇ ಮೊದಲ ಬಾರಿಗೆ ಅಲ್ಲಿನ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ದ್ವೀಪ ಸಮೂಹಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರಿಗೆ ಪ್ರತಿಭಟನೆಯ ಸ್ವಾಗತ ದೊರೆಯಿತು.
ಲಾಕ್ಡೌನ್ ಮಧ್ಯೆ, ಸ್ಥಳೀಯರು ಮನೆಯಲ್ಲೇ ಕಪ್ಪು ಬಾವುಟಗಳನ್ನು ಪ್ರದರ್ಶಿಸಿದರೆ, ಇನ್ನು ಕೆಲವರು ಕಪ್ಪು ಮಾಸ್ಕ್ ಮತ್ತು ಬ್ಯಾಡ್ಜ್ ಧರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಆಲ್-ಪಾರ್ಟಿ ಸೇವ್ ಲಕ್ಷದ್ವೀಪ ವೇದಿಕೆ ಈ ಪ್ರತಿಭಟನೆಯನ್ನು ಆಯೋಜಿಸಿತ್ತು. ಆಡಳಿತಾಧಿಕಾರಿಯವರ “ಜನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ” ಆದೇಶಗಳ ವಿರುದ್ಧ ಇತ್ತೀಚೆಗಷ್ಟೇ ಲಕ್ಷದ್ವೀಪದಲ್ಲಿ ಸರಣಿ ಪ್ರತಿಭಟನೆಗಳು ನಡೆದಿದ್ದವು.
ರಾಜಕೀಯ ಲೆಕ್ಕಿಸದೆ ಲಕ್ಷದ್ವೀಪದ ಎಲ್ಲಾ ಜನರು ಒಂದಾಗಿದ್ದೇವೆ ಎಂದು ಪ್ರತಿಭಟನಕಾರರೊಬ್ಬರು ಹೇಳಿದರು.