ನವದೆಹಲಿ: ಎಂಟು ಜನರ ಸಾವಿಗೆ ಕಾರಣವಾದ ಲಖಿಂಪುರ ಖೇರಿ ಹಿಂಸಾಚಾರದ ಪ್ರಮುಖ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರ ಜಾಮೀನನ್ನು ಸೋಮವಾರ ಸುಪ್ರೀಂಕೋರ್ಟ್ ರದ್ದುಗೊಳಿಸಿದೆ
ಪ್ರಕರಣದ ವಿಚಾರಣೆ ಹೊಸದಾಗಿ ಮರಳಿ ಆರಂಭಿಸುವಂತೆ ಸಿಜೆಐ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ಪೀಠ ಹೈಕೋರ್ಟ್‌ಗೆ ಸೂಚಿಸಿದೆ. ಮೃತರ ಕುಟುಂಬದ ಸದಸ್ಯರಿಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಪರಿಣಾಮಕಾರಿ ವಿಚಾರಣೆಯ ಅವಕಾಶ ನಿರಾಕರಿಸಲಾಗಿದೆ ಎಂಬ ಅಂಶವನ್ನು ಸರ್ವೋಚ್ಚ ನ್ಯಾಯಾಲಯ ಪರಿಗಣಿಸಿದೆ.
“ಸಂತ್ರಸ್ತರ ವಿಚಾರಣೆಗೆ ನಿರಾಕರಿಸಿರುವುದು ಮತ್ತು ಹೈಕೋರ್ಟ್ ತೋರಿದ ತೀವ್ರ ಆತುರದಿಂದಾಗಿ ಜಾಮೀನು ಆದೇಶ ರದ್ದುಗೊಳಿಸಲು ಅರ್ಹವಾಗಿದೆ. ಹೀಗಾಗಿ, ಆರೋಪಿಯ ಜಾಮೀನು ಅರ್ಜಿಯನ್ನು ಹೊಸದಾಗಿ ವಿಚಾರಣೆ ನಡೆಸಲು ಪ್ರಕರಣವನ್ನು ಮತ್ತೆ ಹೈಕೋರ್ಟ್‌ಗೆ ಮರಳಿಸಲಾಗುತ್ತಿದೆ” ಎಂದು ಸುಪ್ರೀಂ ಕೋರ್ಟ್ ವಿವರಿಸಿದೆ.
ಮಿಶ್ರಾ ಒಂದು ವಾರದೊಳಗೆ ಪೊಲೀಸರೆದುರು ಶರಣಾಗಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಕರಣದಲ್ಲಿ ಸಂತ್ರಸ್ತರು ಕ್ರಿಮಿನಲ್ ವಿಚಾರಣೆ ಪ್ರಕ್ರಿಯೆಯಲ್ಲಿ ಮುಕ್ತವಾಗಿ ಭಾಗವಹಿಸುವ ಹಕ್ಕಿದೆ. ಮಿಶ್ರಾಗೆ ಜಾಮೀನು ನೀಡುವಾಗ ಅಲಾಹಾಬಾದ್ ಹೈಕೋರ್ಟ್ ನ್ಯಾಯಾಂಗದ ಪೂರ್ವನಿದರ್ಶನಗಳನ್ನು ಪರಿಗಣಿಸಿಲ್ಲ ಎಂದು ಪೀಠ ತಿಳಿಸಿದೆ.
“ಎಫ್‌ಐಆರ್ ಅನ್ನು ಘಟನೆಗಳ ವಿಶ್ವಕೋಶ ಎಂದು ಪರಿಗಣಿಸಲಾಗದು. ನ್ಯಾಯಾಂಗದ ಪೂರ್ವನಿದರ್ಶನಗಳನ್ನು ಪ್ರಕರಣದಲ್ಲಿ ನಿರ್ಲಕ್ಷಿಸಲಾಗಿದೆ,” ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಆಶಿಶ್ ಅವರ ಜಾಮೀನು ರದ್ದತಿಗಾಗಿ ರೈತರು ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 4ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿತ್ತು.