ಬೆಂಗಳೂರು: ಮನಸ್ಸು ದೇಹ ಕೇಂದ್ರಿಕೃತವಾಗಿದೆ. ದೇಹದ ಬಗ್ಗೆ ಆಸಕ್ತಿ ತೊರೆದು ತನುವಿನ ಅಂತರದಲ್ಲಿರುವ ಅರಿವಿನ ಶೋಧನೆ ಮಾಡಿದಾಗ ಮಾತ್ರ ಅದರ ಸತ್ಯ ಗೋಚರವಾಗಲಿದೆ ಎಂದು ಆಧ್ಯಾತ್ಮಿಕ ಚಿಂತಕ, ಲಕ್ಷ್ಮೀಶ ತೋಳ್ಪಾಡಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಬಸವ ಭವನದಲ್ಲಿ ಬಸವಸಮಿತಿ ಬಸವಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಜರುಗಿದ ಸುದ್ದಿಮೂಲ ಸಂಪಾದಕ ಬಸವರಾಜ ಸ್ವಾಮಿ ಅವರು ಬರೆದ ಸಿದ್ದರಾಮ ಶಿವಯೋಗಿಗಳ ವಚನಾನುಭಾವ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಪುಸ್ತಕದಲ್ಲಿರುವ ಅಂಶಗಳು ಅಂತರಂಗಕ್ಕೆ ತೆಗೆದುಕೊಳ್ಳಬೇಕು ಆ ಮೂಲಕ ಅನುಭಾವ ಪಡೆಯಬೇಕು ಎಂದರು.
ಅಂತರಮುಖಿ ಸತ್ಯದ ವ್ಯಾಖ್ಯಾನ ಈ ಪುಸ್ತಕದಲ್ಲಿ ಅನಾವರಣವಾಗಿದೆ. ಪ್ರತಿ ವಚನದಲ್ಲಿಯೂ ಒಂದು ಸೂತ್ರವಿದೆ, ಮನುಷ್ಯನ ದೇಹದಲ್ಲಿ ಅಡಗಿದ ಅರಿವಿನ ಅರಿವು ಮನುಷ್ಯನಿಗೆ ಆಗಬೇಕಾದರೆ ಅಂತರ ಶೋಧವಾಗಬೇಕು. ಅಧುನಿಕ ಸಮಾಜದಲ್ಲಿ ದೇಹ ಸೌಖ್ಯದ ಕಾಳಜಿಯೇ ಹೆಚ್ಚಾಗಿದೆ. ಅದು ಮನುಷ್ಯನ ಆತ್ಮಸ್ಥೈರ್ಯವನ್ನೇ ಹಾಳು ಮಾಡಿದೆ ಎಂದರು.
ಯಾವುದು ಗೊತ್ತಾಗಬೇಕು ಅದೂ ಗೊತ್ತಾಗುತ್ತಿಲ್ಲ, ಆದರೆ ಗೊತ್ತಾಗಬಾರದ್ದು ಗೊತ್ತಾದರೆ ಏನೂ ಪ್ರಯೋಜನ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ ಅವರು ದೇಹದ ಮೇಲೆ ಆಸೆ ಬಿಟ್ಟರೆ ಅರಿವಿನ ಪರಿಚಯವಾಗುತ್ತದೆ. ಆ ದಿಶೆಯಲ್ಲಿ ನಾವು ಸಾಗಬೇಕು ಎಂದರು.
ಲೇಖಕ ಬಸವರಾಜಸ್ವಾಮಿ ಮಾತನಾಡಿ, ಉಪಜೀವನಕ್ಕಾಗಿ ಬದುಕುವ ಈ ಸಮಾಜದಲ್ಲಿ ಕಲ್ಲಿನ ಮೂರ್ತಿಗೆ ನಮಸ್ಕರಿಸುವ ಪ್ರವೃತ್ತಿ ಇದೆ, ಮನುಷ್ಯನ ದೇಹದಲ್ಲಿಯೇ ಅಗಾದ ಶಕ್ತಿ ಅರಿವಿನ ಶಕ್ತಿ ಇದ್ದರೂ ಅದನ್ನು ತಿಳಿಯುವ ಮತ್ತು ಅದರ ಜ್ಞಾನ ಪಡೆಯಬೇಕೆಂದರೆ ಅರಿವೇ ಗುರುವಾಗಬೇಕು. ಗುರು ಶಿಷ್ಯ ಎನ್ನುವವರು ವ್ಯಕ್ತಿಗಳ, ಗಂಡು ಮತ್ತು ಹೆಣ್ಣು ಎಂಬುದು ಅಂಗ ಬೇಧವಲ್ಲ. ನಾವು ನೋಡುವ ದೃಷ್ಟಿಯಿಂದ ಗಂಡು ಹೆಣ್ಣು ಎಂದು ಗುರುತಿಸುತ್ತೇವೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ, ಪ್ರತಿಯೊಬ್ಬರಿಗೂ ಭೌತಿಕ ಸಂಪತ್ತಿನ ಕಡೆ ಹೆಚ್ಚು ಒಲವು ಇದೆ, ಜ್ಞಾನದ ಸಂಪತ್ತಿನ ಕಡೆ ಆಸಕ್ತಿ ಇಲ್ಲ. ಕಲ್ಯಾಣ ಕ್ರಾಂತಿ ಅರಿವಿನ ಕ್ರಾಂತಿಯಾಗಿತ್ತು. ಸಮಾಜದಲ್ಲಿ ಸಮಾನತೆ ಸಾರಲು ಬಸವಣ್ಣನ ಕೊಡುಗೆ ಅಪಾರವಾಗಿದೆ. ಬಸವ ಸಮಿತಿ 40 ವರ್ಷಗಳಿಂದ ಬಸವ ತತ್ವದ ಪ್ರಚಾರಕ್ಕೆ ತನ್ನನ್ನು ಸಮರ್ಪಿಸಿಕೊಂಡಿದೆ ಎಂದರು.
ಸುದ್ದಿಮೂಲ ಮುಖ್ಯ ವರದಿಗಾರ ಬಿ. ವೆಂಕಟಸಿಂಗ್ ಪ್ರಸ್ತಾವಿಕವಾಗಿ ಮಾತನಾಡಿದರು. ಬಸವಸಮಿತಿ ನಿರ್ದೇಶಕಿ ಭುವನೇಶ್ವರಿ ಕಾರ್ಯಕ್ರಮ ನಿರೂಪಿಸಿದರು.