ಪ್ರತಿ ತಿಂಗಳು ಕಾರ್ಮಿಕ ಅದಾಲತ್: ಸಚಿವ ಶಿವರಾಂ ಹೆಬ್ಬಾರ್

Prasthutha|

ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ವಿವಿಧ ಕಾರಣಗಳಿಂದ ಬಾಕಿ ಉಳಿದಿದ್ದ ಕಾರ್ಮಿಕರ ಸಮಸ್ಯೆಗಳು ಮತ್ತು ಪರಿಹಾರ ಅರ್ಜಿಗಳನ್ನು ಒಂದೇ ಬಾರಿಗೆ ವಿಲೇವಾರಿ ಮಾಡುವ ಸಲುವಾಗಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ರೂಪಿಸಿ ಜಾರಿಗೊಳಿಸಿದ ‘ಕಾರ್ಮಿಕ ಅದಾಲತ್’ ಯಶಸ್ಸಿನ ನಂತರ ಇದೀಗ ಪ್ರತಿ ತಿಂಗಳು ಇದೇ ಮಾದರಿ ‘ಕಾರ್ಮಿಕ ಅದಾಲತ್’ ನಡೆಸಲು ಇಲಾಖೆ ಮುಂದಡಿ ಇರಿಸಿದೆ.

- Advertisement -


ಕಾರ್ಮಿಕರ ಸಹಾಯಧನ ಅರ್ಜಿ, ಪರಿಹಾರ ಅರ್ಜಿ ಸೇರಿದಂತೆ ಕೆಲ ವಿವಾದಗಳು ಅಂತ್ಯ ಕಾಣದೆ ವರ್ಷಾನುಗಟ್ಟಲೆಯಿಂದ ಬಾಕಿ ಇದ್ದದ್ದನ್ನು ಮನಗಂಡ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ‘ಕಾರ್ಮಿಕ ಅದಾಲತ್’ ಕಾರ್ಯಕ್ರಮ ರೂಪಿಸುವ ಮೂಲಕ ಈ ಅರ್ಜಿಗಳ ವಿಲೇವಾರಿಗೆ ಕ್ರಮವಹಿಸಿದರು. ಇದರ ಪ್ರತಿಫಲವಾಗಿ ರಾಜ್ಯದ ಎಲ್ಲ ತಾಲ್ಲೂಕುಗಳಲ್ಲಿ ಭಾರೀ ಪ್ರಚಾರದೊಂದಿಗೆ ನಡೆದ ಈ ಅದಾಲತ್ ನಲ್ಲಿ 2.83 ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.


‘ಕಾರ್ಮಿಕ ಅದಾಲತ್’ ಯೋಜನೆ ಯಶಸ್ವಿ ಜಾರಿಗೆ ಅನುವಾಗುವಂತೆ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿತ್ತಲ್ಲದೆ, ತಾಲ್ಲೂಕು ಮತ್ತು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಂದ ನಿಗದಿತ ಅರ್ಜಿಗಳ ವಿವರ ಮತ್ತು ಪರಿಹಾರದ ಕ್ರಮಗಳ ಬಗ್ಗೆ ಪದೇ ಪದೇ ಮಾಹಿತಿ ಪಡೆಯುವ ಮೂಲಕ ಕಾರ್ಯಕ್ರಮ ಅನುಷ್ಠಾನಕ್ಕೆ ಶ್ರಮಿಸಿದರೆ, ಸಚಿವ ಶಿವರಾಂ ಹೆಬ್ಬಾರ್ ಅವರು ಕಾರ್ಮಿಕ ಅದಾಲತ್ ಜಾರಿ ಮತ್ತು ನಿರ್ವಹಣೆಗೆ ಅನುವಾಗಲು ನೋಡಲ್ ಅಧಿಕಾರಿಗಳನ್ನು ನೇಮಿಸಿ ಹೆಚ್ಚಿನ ಕಾರ್ಮಿಕರಿಗೆ ಅನುಕೂಲವಾಗುವಂತೆ ಅದಾಲತ್ ಕಾರ್ಯಕ್ರಮ ರೂಪಿಸಿದರು.

- Advertisement -


ಕಾರ್ಮಿಕ ಇಲಾಖೆ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ನಡೆದ ಇಂತಹ ಅದಾಲತ್ನಲ್ಲಿ ಕಟ್ಟಡ ಮತ್ತು ಇತರೆ ಕಾರ್ಮಿಕ ನಿರ್ಮಾಣ ಕಾರ್ಮಿಕ ಮಂಡಳಿ ಹಾಗೂ ಕರ್ನಾಟಕ ಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ಸಂಬAಧಿಸಿದAತೆ ಬಾಕಿ ಉಳಿದಿದ್ದ ಹೆಚ್ಚಿನ ಅರ್ಜಿಗಳು ವಿಲೇವಾರಿಯಾಗಿದ್ದು, ಅರೆ ನ್ಯಾಯಿಕ ಪ್ರಕರಣಗಳು, ಕೈಗಾರಿಕಾ ವಿವಾದ ಮತ್ತು ದೂರುಗಳಿಗೆ ಸಂಬಂಧಿಸಿದ ಅರ್ಜಿಗಳು ಬಾಕಿ ಇರುವ ಪರಿಣಾಮ ಸಚಿವ ಶಿವರಾಂ ಹೆಬ್ಬಾರ್ ಅವರ ಸೂಚನೆಯಂತೆ ಇಲಾಖೆಯು ಪ್ರತಿ ತಿಂಗಳ ಒಂದು ದಿನ ತಾಲ್ಲೂಕು ಮಟ್ಟದಲ್ಲಿ ಕಾರ್ಮಿಕ ಅದಾಲತ್ ನಡೆಸುವಂತೆ ಇಲಾಖೆಯು ಆದೇಶಿಸಿದೆ.


ಆಗಸ್ಟ್- ಸೆಪ್ಟೆಂಬರ್ ಮಾಹೆಯಲ್ಲಿ ನಡೆದ ಕಾರ್ಮಿಕ ಅದಾಲತ್ ಯಶಸ್ಸಿನ ಹಿನ್ನೆಲೆಯಲ್ಲಿ ಫಲಾನುಭವಿಗಳಿಗೆ ಹಾಗೂ ಕಾರ್ಮಿಕರಿಗೆ ಶೀಘ್ರ ನ್ಯಾಯ ಒದಗಿಸಲು ಹಾಗೂ ಅರ್ಹ ಸೌಲಭ್ಯಗಳನ್ನು ತಲುಪಿಸುವ ಹಿತದೃಷ್ಟಿಯಿಂದ ಇಲಾಖೆಯ ಹಿರಿಯ ಕಾರ್ಮಿಕರ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು ವಿವಿಧ ಕಾರ್ಮಿಕ ಕಾಯ್ದೆಗಳಡಿ ಹಾಗೂ ವಿವಿಧ ಮಂಡಳಿಗಳ ಮೂಲಕ ಅನುಷ್ಠಾನಗೊಳಿಸುವ ಯೋಜನೆಗಳಡಿ ಸ್ವೀಕೃತವಾಗಿ ಬಹಳ ಕಾಲದಿಂದ ಇತ್ಯರ್ಥವಾಗದೆ ಬಾಕಿ ಉಳಿದಿರುವ ಪ್ರಕರಣಗಳು/ ಕಡತಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಪ್ರತಿ ತಾಲ್ಲೂಕುಗಳಲ್ಲಿ ತಿಂಗಳಲ್ಲಿ ಒಂದು ದಿನ ಕಾರ್ಮಿಕ ಅದಾಲತ್ ನಡೆಸಲು ಇಲಾಖೆ ಆಯುಕ್ತ ಅಕ್ರಂ ಪಾಷ ಅವರು ಆದೇಶಿಸಿದ್ದಾರೆ.


ಕಾರ್ಮಿಕ ಅದಾಲತ್ ಅನ್ನು ನಿರಂತರವಾಗಿ ಸಮರೋಪಾದಿಯಲ್ಲಿ ಸಂಘಟಿಸುವ ಮೂಲಕ ಬಡ ಕಾರ್ಮಿಕರಿಗೆ ನೆರವು ಒದಗಿಸಲು ಹಾಗೂ ಬಾಕಿ ಇರುವ ಗರಿಷ್ಠ ಮಟ್ಟದ ಪ್ರಕರಣಗಳನ್ನು ಶೂನ್ಯಕ್ಕೆ ಇಳಿಸಬೇಕೆಂಬ ರಾಜ್ಯ ಸರ್ಕಾರದ ಸ್ಪಷ್ಟ ಸೂಚನೆ ನೀಡಿದ್ದು, ಅದಾಲತ್ ಜಾರಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಆದೇಶದಲ್ಲಿ ಸೂಚಿಸಲಾಗಿದ್ದು, ಅದಾಲತ್ಗೆ ಸ್ಥಳೀಯವಾಗಿಯೇ ಸೂಕ್ತ ದಿನಾಂಕ ನಿರ್ಧರಿಸಿ ಪ್ರಚಾರ ಕೈಗೊಂಡು ಕಾರ್ಯಕ್ರಮ ನಡೆಸುವಂತೆ ಆದೇಶದಲ್ಲಿ ವಿವರಿಸಲಾಗಿದೆ.

ಪ್ರದೇಶಿಕ ವ್ಯಾಪ್ತಿಯ ಎಲ್ಲಾ ಉಪ ಕಾರ್ಮಿಕ ಆಯುಕ್ತರು, ವಿಭಾಗೀಯ ಮಟ್ಟದ ಅಧಿಕಾರಿಗಳಾದ ಸಹಾಯಕ ಕಾರ್ಮಿಕ ಆಯುಕ್ತರು ತಮ್ಮ ಕಚೇರಿಗಳ ವ್ಯಾಪ್ತಿಯಲ್ಲಿ ಬಾಕಿ ಇರುವ ಪ್ರಕರಣಗಳ ಮತ್ತು ಅರ್ಜಿಗಳ ವಿಲೇವಾರಿಗೆ ಕ್ರಮಕೈಗೊಂಡು ಅಧೀನ ಅಧಿಕಾರಿಗಳಾದ ಕಾರ್ಮಿಕ ಅಧಿಕಾರಿ, ಹಿರಿಯ ಕಾರ್ಮಿಕ ನಿರೀಕ್ಷಕರು ಮತ್ತು ಕಾರ್ಮಿಕ ನಿರೀಕ್ಷಕರುಗಳು ತಮ್ಮ ವ್ಯಾಪ್ತಿಯ ಪ್ರಕರಣಗಳ ಬಗ್ಗೆ ಆಗ್ಗಿಂದಾಗ್ಗೆ ಸಭೆ ನಡೆಸಿ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಅರ್ಜಿಗಳ ವಿಲೇವಾರಿಯಲ್ಲಿ ತೊಡಗಿಕೊಳ್ಳಬೇಕೆಂದು ಸೂಚಿಸಲಾಗಿದೆ.


ಕಾರ್ಮಿಕ ಅದಾಲತ್ ಸಮರ್ಥ ಜಾರಿಗೆ ಅನುವಾಗುವಂತೆ ಅದಾಲತ್ ನಲ್ಲಿ ವಿಲೇವಾರಿಯಾದ ಅರ್ಜಿಗಳ ಬಗ್ಗೆ ಜಿಲ್ಲಾವಾರ ಮಾಹಿತಿಯನ್ನು ಎಲ್ಲ ಉಪ ಕಾರ್ಮಿಕ ಆಯುಕ್ತರು ಕ್ರೋಢೀಕರಿಸಿ ಪ್ರತಿ ತಿಂಗಳ 10ನೇ ತಾರೀಖಿಗೂ ಮುನ್ನ ಕೇಂದ್ರ ಕಚೇರಿಗೆ ತಲುಪಿಸುವಂತೆ ಆಯುಕ್ತರು ತಮ್ಮ ಆದೇಶದಲ್ಲಿ ಸೂಚನೆ ನೀಡುವ ಮೂಲಕ ಅದಾಲತ್ ಯಶಸ್ಸಿನ ಬಗ್ಗೆ ನಿಗಾವಹಿಸುವ ಮುನ್ಸೂಚನೆ ನೀಡಿದ್ದಾರೆ.

Join Whatsapp