ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿ ತಿಳಿಯಲು KYC ಆ್ಯಪ್‌

Prasthutha|

ದಾವಣಗೆರೆ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ವಿವರ ಹಾಗೂ ಅವರ ಅಪರಾಧದ ಪೂರ್ವಾಪರ ಕುರಿತ ಮಾಹಿತಿಯನ್ನು ಮತದಾರರಿಗೆ ನೀಡಲು ಭಾರತೀಯ ಚುನಾವಣ ಆಯೋಗ ಅಭಿವೃದ್ಧಿ ಪಡಿಸಿರುವ “ಕೆವೈಸಿ’ (ನೊ ಯುವರ್‌ ಕ್ಯಾಂಡಿಡೇಟ್‌-ನಿಮ್ಮ ಅಭ್ಯರ್ಥಿಯನ್ನು ತಿಳಿಯಿರಿ) ಆ್ಯಪ್‌ ಈ ಬಾರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಪ್ರಚಲಿತವಾಗುವ ಸಾಧ್ಯತೆಯಿದೆ.

- Advertisement -

ಚುನಾವಣ ಆಯೋಗ 2022ರಲ್ಲಿಯೇ ಕೆವೈಸಿ ಆ್ಯಪ್‌ ಅಭಿವೃದ್ಧಿಪಡಿಸಿದ್ದು, ಒಂದು ವರ್ಷದಲ್ಲಿ ನಡೆಸಿದ ಬಹುತೇಕ ಎಲ್ಲ ಸಾರ್ವತ್ರಿಕ ಚುನಾವಣೆಗಳಲ್ಲಿ ಈ ಆ್ಯಪ್‌ನಲ್ಲಿ ಮಾಹಿತಿ ಅಪ್‌ಲೋಡ್‌ ಮಾಡಿ ಮತದಾರರಿಗೆ ಅವರ ಅಭ್ಯರ್ಥಿಗಳ ವಿವರ ದೊರಕುವಂತೆ ಮಾಡಿದೆ.

ರಾಜ್ಯದಲ್ಲಿ ನಡೆದ ಹಿಂದಿನ ಚುನಾವಣೆಗಳಲ್ಲಿ ಅಪರಾಧ ಹಿನ್ನೆಲೆಯ ಅಭ್ಯರ್ಥಿಗಳು ತಮ್ಮ ಕ್ರಿಮಿನಲ್‌ ಪ್ರಕರಣಗಳ ಕುರಿತು ಮಾಧ್ಯಮದ ಮೂಲಕ ಮತ ದಾರರಿಗೆ ಮಾಹಿತಿ ನೀಡುವುದನ್ನು ಕಡ್ಡಾಯಗೊಳಿ ಸಿದ್ದ ಆಯೋಗ, ಈಗ ಕೆವೈಸಿ ಆ್ಯಪ್‌ ಮೂಲಕ ನಾಗರಿಕರಿಗೆ ಅಭ್ಯರ್ಥಿಗಳ ಕುರಿತು ಸಮಗ್ರ ಮಾಹಿತಿ ನೀಡುತ್ತಿದೆ. ಜತೆಗೆ ಚುನಾವಣೆ ಕುರಿತು ಹಲವು ಅಂಕಿ-ಅಂಶಗಳನ್ನೂ ನೀಡಲಿದ್ದು, ಚುನಾವಣೆ ಪ್ರಕ್ರಿಯೆ ಎಲ್ಲರಿಗೂ ಸುಲಭವಾಗಿ ತಲುಪುವಲ್ಲಿ ಆ್ಯಪ್‌ ಸಹಕಾರಿಯಾಗಲಿದೆ. ಅಭ್ಯರ್ಥಿಗಳ ಅಧಿಕೃತ ಮಾಹಿತಿ ಪಡೆದು ಮತದಾರರು ತಮ್ಮ ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿದೆ.

- Advertisement -

ಆ್ಯಪ್‌ ಅನ್ನು ಆ್ಯಂಡ್ರಾಯ್ಡ್ ಹಾಗೂ ಐಒಎಸ್‌ ತಂತ್ರಾಂಶದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಅಪ್ಲಿಕೇಶನ್‌ ಅನ್ನು ಗೂಗಲ್‌ ಪ್ಲೇಸ್ಟೋರ್‌ ಮತ್ತು ಆ್ಯಪಲ್‌ ಸ್ಟೋರ್‌ಗಳಿಂದ ಸುಲಭವಾಗಿ ಡೌನ್‌ಲೋಡ್‌ ಮಾಡಿ ಕೊಳ್ಳಬಹುದು. ಇದರ ಲಿಂಕ್‌ ಹಾಗೂ ಕ್ಯು ಆರ್‌ ಕೋಡ್‌ ಭಾರತೀಯ ಚುನಾವಣ ಆಯೋಗದ ವೆಬ್‌ಸೈಟ್‌ನಲ್ಲೂ ಲಭ್ಯವಿದೆ.

KYC ಆ್ಯಪ್‌‌ನಲ್ಲಿ ಲಭ್ಯವಾಗುವ ಮಾಹಿತಿಗಳು

– ಕ್ಷೇತ್ರವಾರು ಅಭ್ಯರ್ಥಿಗಳ ಫೋಟೋ
– ಸ್ಪರ್ಧಿಸುವ ಕ್ಷೇತ್ರ, ಪಕ್ಷದ ಮಾಹಿತಿ
– ನಾಮಪತ್ರ ಸ್ವೀಕಾರ, ತಿರಸ್ಕಾರ
– ಅಪರಾಧ ಹಿನ್ನೆಲೆ ಮಾಹಿತಿ
– ಆಸ್ತಿ ವಿವರದ ಅಫಿದವಿತ್‌
– ಒಟ್ಟಾರೆ ಅಭ್ಯರ್ಥಿಗಳ ಸಂಖ್ಯೆ



Join Whatsapp