ಕುವೈತ್: ಭಾರತೀಯ ಮುಸ್ಲಿಮರ ವಿರುದ್ಧ ಹಿಂದುತ್ವ ಮೂಲಭೂತವಾದಿಗಳು ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಲು ಮತ್ತು ಭದ್ರತೆಯನ್ನು ಮರು ಸ್ಥಾಪಿಸಲು ಕ್ರಮ ಜರುಗಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸಮುದಾಯದ ಮಧ್ಯಪ್ರವೇಶಕ್ಕೆ ಕುವೈತ್ ಸಂಸತ್ ಪ್ರಾಧಿಕಾರ ಒತ್ತಾಯಿಸಿದೆ.
ಮಾತ್ರವಲ್ಲ ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಅರಬ್ ಒಕ್ಕೂಟ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದೆ.
ಮುಸ್ಲಿಂ ಸಮುದಾಯದ ವಿರುದ್ಧ ಅಧಿಕಾರಿಗಳು ಮತ್ತು ಹಿಂದುತ್ವವಾದಿಗಳು ನಡೆಸುತ್ತಿರುವ ದೌರ್ಜನ್ಯವನ್ನು ಕುವೈತ್ ರಾಷ್ಟ್ರೀಯ ಅಸೆಂಬ್ಲಿ ಬಲವಾಗಿ ಖಂಡಿಸಿದೆ.
ಅಸ್ಸಾಂ ನಲ್ಲಿ ಮುಸ್ಲಿಮ್ ಸಮುದಾಯದ ಬಡ ಕುಟುಂಬಗಳನ್ನು ದೇಶದಿಂದ ಒಕ್ಕಲೆಬ್ಬಿಸಿದ ಕ್ರಮವನ್ನು ಖಂಡಿಸಿ ಪ್ರತಿಭಟಿಸಿದ ನಿರಾಯುಧ ಜನರ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆಯನ್ನು ಖಂಡಿಸಿ ಕುವೈತ್ ಪ್ರಾಧಿಕಾರದಿಂದ ಈ ಹೇಳಿಕೆ ಹೊರಬಿದ್ದಿದೆ.
ಇತ್ತೀಚೆಗೆ ಅಸ್ಸಾಮ್ ನಲ್ಲಿ ಅಲ್ಲಿನ ಸರ್ಕಾರ ಒಕ್ಕಲೆಬ್ಬಿಸುವ ನೆಪದಲ್ಲಿ ನಡೆಸಿದ ಕಾರ್ಯಾಚರಣೆಯ ವೇಳೆ ಪ್ರತಿಭಟಿಸಿದವರ ಮೇಲೆ ಗುಂಡಿಕ್ಕಿದ ಪರಿಣಾಮ 12 ವರ್ಷದ ಬಾಲಕ ಸೇರಿದಂತೆ ಇಬ್ಬರು ಸಾವನ್ನಪ್ಪಿ, 10 ಮಂದಿ ಗಾಯಗೊಂಡಿದ್ದರು.