ಕುರುವ, ಕೊರಮ, ಕೊರಚ ಸಮಾಜ ಪರಿಶಿಷ್ಟ ಜಾತಿಗೆ ಸೇರಿವೆ; ಎಸ್‌ಸಿ ಕೆಟಗರಿಯಿಂದ ತೆಗೆಯಲು ಸಾಧ್ಯವಿಲ್ಲ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಕುರುವ, ಕೊರಮ, ಕೊರಚ ಸಮಾಜ ಪರಿಶಿಷ್ಟ ಜಾತಿಗೆ ಸೇರಿದ್ದು, ಯಾವುದೇ ಕಾರಣಕ್ಕೂ ಎಸ್‌ಸಿ ಕೆಟಗರಿಯಿಂದ ತೆಗೆಯಲು ಯಾರಿಗೂ ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ವಸಂತ ನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕುರುವ, ಕೊರಮ, ಕೊರಚ ಸಮಾಜಕ್ಕೆ ಮೀಸಲಾತಿ ಇದೆ. ಶಿಕ್ಷಣ, ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಈ ಜನಾಂಗಕ್ಕೆ ಇದೆ. ಆದರೆ ಇದರ ಉಪಯೋಗ ಎಲ್ಲರಿಗೂ ಸಿಗುತ್ತಿಲ್ಲ, ಕೆಲವರಿಗೆ ಸಿಗುತ್ತಿದೆ ಎಂದು ಹೇಳಿದರು.

ಬಸವ ಶರಣರು ವೈಜ್ಞಾನಿಕವಾಗಿ ಬೆಳೆಯಬೇಕು. ಜಾತಿ ಪದ್ದತಿ ಹೋಗಬೇಕು. ಮನುಷ್ಯರೆಲ್ಲರೂ ಒಂದೇ. ಸ್ವಾರ್ಥಿಗಳು ಜಾತಿ ಮಾಡಿದ್ದಾರೆ. ನಾವು ಕುರಿ ಕಾಯತ್ತಾ ಇದ್ದೆವು, ಕುರುಬರು ಅಂತಾ ಮಾಡಿದರು. ದನ ಕಾಯೋರಿಗೆ ಗೊಲ್ಲರು ಅಂದರು. ವೃತ್ತಿಗೆ ಅನುಗುಣವಾಗಿ ಜಾತಿ‌ ಮಾಡಿದರು. ಇವತ್ತಿನ ಸಮಾಜದಲ್ಲಿ ರಾಜಕೀಯವಾಗಿ, ಶೈಕ್ಷಣಿಕವಾಗಿ ಹೇಗಿದ್ದೇವೆ ಅನ್ನೋದು ಮುಖ್ಯ.

- Advertisement -

ಎಷ್ಟು ಕಾಯಕ ಮಾಡುತ್ತೇವೆ ಅಷ್ಟೇ ಬೆಲೆ ಇರಬೇಕು. ಶ್ರಮಕ್ಕೆ ಫಲ ಇರಬೇಕು. ಬಸವಾದಿ ಶರಣರಲ್ಲಿ ಅಗ್ರಗಣ್ಯರು ನುಲಿಯ ಚಂದಯ್ಯ. ಅನುಭವಮಂಟಪ ಪ್ರಜಾಪ್ರಭುತ್ವಕ್ಕೆ ಆದಿ. ಅನುಭವ ಮಂಟಪದಲ್ಲಿ ಎಲ್ಲಾ ಜಾತಿಯವರು ಸಮಾನವಾಗಿ ಕುಳಿತುಕೊಳ್ಳುತ್ತಿದ್ದರು.

ಮನುಷ್ಯರಲ್ಲಿ ಅಂತಸ್ತುಗಳನ್ನು ತೊಡೆದು ಹಾಕುವುದೇ ಸಾಮಾಜಿಕ ಕ್ರಾಂತಿ. ಧರ್ಮ ಅಂದರೆ ಎಲ್ಲರಿಗೂ ಒಳ್ಳೆಯದು ಬಯಸುವುದು. ದಯವೇ ಧರ್ಮದ ಮೂಲವಯ್ಯ. ಮನುಷ್ಯ ಮನುಷ್ಯರನ್ನ ಪ್ರೀತಿಸುವುದೇ ಧರ್ಮ. ಮನುಷ್ಯ ಮನುಷ್ಯನನ್ನು ನೋಯಿಸುವುದೇ ಅಧರ್ಮ. ಅದಕ್ಕೆ ಎಲ್ಲರೂ ಮನುಷ್ಯರಾಗಿ ಇರಬೇಕು ಎಂದು ಹೇಳಿದರು.