ಎಟ್ಟಿಕುಳಂ: ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರ ತಂಙಲ್ ನಿಧನರಾಗಿದ್ದಾರೆ. ಕೇರಳದ ಎಟ್ಟಿಕುಳಂನಲ್ಲಿರುವ ಮನೆಯಲ್ಲಿ ಅವರು ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಉಳ್ಳಾಲ ತಂಙಳ್ ಎಂದೇ ಪ್ರಸಿದ್ಧರಾದ ತಾಜುಲ್ ಉಲಮಾ ಅಬ್ದುರ್ರಹ್ಮಾನ್ ಕುಂಞಿಕೋಯ ತಂಙಳ್ ಅವರ ಪುತ್ರರೂ ಆಗಿರುವ ಅಸೈಯದ್ ಫಝಲ್ ಕೋಯಮ್ಮ ತಂಙಲ್ ಪ್ರಸ್ತುತ ಉಳ್ಳಾಲ ಖಾಝಿಯಾಗಿದ್ದರು.
ಇಂದು ಅಪರಾಹ್ನ ಉಳ್ಳಾಲ ಸೈಯದ್ ಮದನಿ ದರ್ಗಾ ವಠಾರದಲ್ಲಿ ಅವರು ಭಾಗವಹಿಸುವ ಕಾರ್ಯಕ್ರಮ ನಿಗದಿಯಾಗಿತ್ತು. ಸೈಯದ್ ಮದನಿ ಶರೀಅತ್ ಕಾಲೇಜು ವಿದ್ಯಾರ್ಥಿಗಳ ನೂತನ ಹಾಸ್ಟೆಲ್ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರು. ರಾತ್ರಿ ಅವರು ಮಜ್ಲಿಸ್ ಒಂದರಲ್ಲಿ ಭಾಗವಹಿಸಿ ಪ್ರಾರ್ಥನೆ ನಡೆಸಿದ್ದರು. ಆರೋಗ್ಯವಂತರಾಗಿಯೇ ಮನೆಯಲ್ಲಿ ಇದ್ದ ಕೂರ ತಂಙಳ್‌ಗೆ ಇಂದು ಬೆಳಿಗ್ಗೆ ಹೃದಯಸ್ತಂಭನವಾಗಿದೆ.
ಇಂದು ಅಪರಾಹ್ನ 2 ಗಂಟೆಯವರೆಗೆ ಎಟ್ಟುಕ್ಕುಳಂನಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಪಾರ್ಥಿವ ಶರೀರವು ಸಂಜೆ 7 ಗಂಟೆ ಸುಮಾರಿಗೆ ಉಳ್ಳಾಲ ಜುಮಾ ಮಸೀದಿ ಮತ್ತು ಸೈಯದ್ ಮದನಿ ದರ್ಗಾ ವಠಾರಕ್ಕೆ ತಲುಪಲಿದೆ. ಆ ಬಳಿಕ ಕಡಬ ತಾಲೂಕಿನ ಕೂರತ್ ಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ದಫನ ಕಾರ್ಯ ನೆರವೇರಲಿದೆ ಎಂದು ಉಳ್ಳಾಲ ಸೈಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ತಿಳಿಸಿದ್ದಾರೆ.
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯ, ಕಾಸರಗೋಡು ದೇಳಿಯ ಜಾಮಿಯ ಸಅದಿಯ್ಯ ಇದರ ಪ್ರಧಾನ ಕಾರ್ಯದರ್ಶಿಯಾಗಿದ್ದ ಕೂರತ್ ತಂಙಳ್ ಅವರು 2014ರಲ್ಲಿ ತಾಜುಲ್ ಉಲಮಾ ನಿಧನರಾದ ಬಳಿಕ ಉಳ್ಳಾಲ ಖಾಝಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.