ಉಡುಪಿ : ಕುಂದಾಪುರ ತಾಲೂಕಿನ ಕಂಡ್ಲೂರು ಕಾವ್ರಾಡಿ ಗ್ರಾಮ ಪಂಚಾಯತ್’ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಎಸ್.ಡಿ.ಪಿ.ಐ ಬೆಂಬಲಿತ ಅಭ್ಯರ್ಥಿ ನೌಶೀನ್ ಹಸರತ್ ಮತ್ತು ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಸಂತೋಷ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಕಂಡ್ಲೂರು ಕಾವ್ರಾಡಿ ಗ್ರಾ.ಪಂ.ನಲ್ಲಿ ಕಾಂಗ್ರೆಸ್ ಮತ್ತು ಎಸ್ ಡಿ ಪಿಐ ಬೆಂಬಲಿತರು ಮೈತ್ರಿಯಾಗಿದ್ದು ಮೊದಲ ಅವಧಿಯಲ್ಲೂ ಅಧಿಕಾರ ಹಂಚಿಕೊಂಡಿದ್ದರು. ಮೊದಲ ಅವಧಿಯಲ್ಲಿ ಕಾಂಗ್ರೆಸ್ ಬೆಂಬಲಿತರು ಅಧ್ಯಕ್ಷರಾಗಿ ಮತ್ತು ಎಸ್ ಡಿ ಪಿಐ ಬೆಂಬಲಿತರು ಉಪಾಧ್ಯಕ್ಷರಾಗಿದ್ದರು. ಮೊದಲ ಅವಧಿಯಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಸ್ ಡಿ ಪಿಐ ಬೆಂಬಲಿತ ನೌಶೀನ್ ಹಸರತ್ ಎರಡನೇ ಅವಧಿಯಲ್ಲಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
ಒಟ್ಟು 16 ಸದಸ್ಯ ಬಲದ ಪಂಚಾಯತ್’ನಲ್ಲಿ ಬಿಜೆಪಿ ಬೆಂಬಲಿತ 7 ಮಂದಿ ಸದಸ್ಯರಿದ್ದರು, ಕಾಂಗ್ರೆಸ್ ಬೆಂಬಲಿತ 5 ಮತ್ತು ಎಸ್ ಡಿ ಪಿ ಐ ಬೆಂಬಲಿತ ನಾಲ್ವರು ಸದಸ್ಯರಿದ್ದಾರೆ. ಇಂದು ನಡೆದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಎಸ್ ಡಿ ಪಿಐ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿ ನೌಶೀನ್ ಹಸರತ್ ಮತ್ತು ಕಾಂಗ್ರೆಸ್ ಬೆಂಬಲಿತ ಉಪಾಧ್ಯಕ್ಷ ಅಭ್ಯರ್ಥಿ ಸಂತೋಷ್ ಶೆಟ್ಟಿ ತಲಾ 9 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಸೋಲಿಸಿ ಅಧಿಕಾರಕ್ಕೇರಿದ್ದಾರೆ.
ನೂತನವಾಗಿ ಆಯ್ಕೆಯಾದ ಗ್ರಾ.ಪಂ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಕಂಡ್ಲೂರು ಭಾಗದ ಜನರು ಅಭಿನಂದನೆ ಸಲ್ಲಿಸಿದ್ದಾರೆ. ಗ್ರಾಮದಲ್ಲಿ ಸರ್ವತೋಮುಖ ಅಭಿವೃದ್ಧಿ ಮಾಡಿ ಮಾದರಿ ಗ್ರಾಮವನ್ನಾಗಿ ಮಾಡಲು ಮನವಿ ಮಾಡಿದ್ದಾರೆ.