April 2, 2021

ಗಡಿ ಭದ್ರತಾ ಪಡೆಗೆ ಸೇರಿದ ಕುಂದಾಪುರದ ಕುವರಿ ವಿದ್ಯಾ ಗೌಡ !

ಕುಂದಾಪುರ: ಭಾರತೀಯ ಸೇನೆ ಎಂದ ಕೂಡಲೇ ಪ್ರತೀ ಭಾರತೀಯನ ಮೈ ರೋಮಾಂಚನಗೊಳ್ಳುತ್ತದೆ. ಭಾರತೀಯ ಸೇನೆಯ ಶಕ್ತಿಯೇ ಹಾಗೆ. ಸೇನೆಗೆ ಸೇರಬೇಕೆಂಬ ಹಂಬಲ, ಆಕಾಂಕ್ಷೆ ಹಲವರಲ್ಲಿದ್ದರೂ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಭಾರತೀಯ ಸೇನೆ ಎಂದಾಕ್ಷಣವೇ ಸಾಮಾನ್ಯವಾಗಿ ಅಲ್ಲಿ ಕಾರ್ಯನಿರ್ವಹಿಸುವುದು ಪುರುಷರು ಎಂಬ ಕಲ್ಪನೆ ಹಲವರಲ್ಲಿದೆ. ಆದರೆ ಕೆಲ ವರ್ಷಗಳಿಂದ ಮಹಿಳೆಯರಿಗೂ ಸೇನೆಯಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಇದೀಗ ಬೈಂದೂರು ತಾಲೂಕಿನ ಯುವತಿಯೂರ್ವಳು ಭಾರತೀಯ ಗಡಿ ಭದ್ರತಾ ಪಡೆಗೆ ಸೇರಲು ಸಿದ್ಧಳಾಗಿ ನಿಂತಿದ್ದಾಳೆ.

ಬೈಂದೂರು ತಾಲೂಕಿನ ಏಳಜಿತ್ ಗ್ರಾಮದ ಹುಣ್ಸೆಮಕ್ಕಿ ನಿವಾಸಿಯಾದ ವಿದ್ಯಾ ಗೌಡ ಏಪ್ರಿಲ್ 1ರಿಂದ ತರಬೇತಿಗೆ ಹಾಜರಾಗಿದ್ದಾರೆ. ಏಳಜಿತದ ಗ್ರಾಮದ ಹುಣ್ಸೆಮಕ್ಕಿ ರಮೇಶ್ ಗೌಡ ಹಾಗೂ ಪಾರ್ವತಿ ದಂಪತಿಗಳ ಇಬ್ಬರು ಮಕ್ಕಳಲ್ಲಿ ಕಿರಿಯವಳಾದ ವಿದ್ಯಾ ಹೆಚ್. ಗೌಡ ತನ್ನ ಪ್ರಾಥಮಿಕ ಶಿಕ್ಷಣವನ್ನು ಏಳಜಿತ ಶಾಲೆ, ಹೈಸ್ಕೂಲ್ ಶಿಕ್ಷಣವನ್ನು ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆ, ಪಿಯುಸಿ ಶಿಕ್ಷಣವನ್ನು ಕುಂದಾಪುರ ಜ್ಯೂನಿಯರ್ ಕಾಲೇಜು, ಬಿಎಸ್ಸಿ ಪದವಿಯನ್ನು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಹಾಗೂ ಬಿ.ಎಡ್ ಪದವಿಯನ್ನು ಕೋಡಿ ಬ್ಯಾರೀಸ್ ಕಾಲೇಜಿನಲ್ಲಿ ಪೂರೈಸಿದ್ದಾರೆ. ವಿದ್ಯಾ ಗೌಡ ಮಧ್ಯಪ್ರದೇಶ ಗ್ವಾಲಿಯರ್ ನಲ್ಲಿ ತರಬೇತಿ ಪಡೆಯಲು ಮಾರ್ಚ್ 30ರಂದು ತೆರಳಿದ್ದಾರೆ.

ವಿದ್ಯಾ ಕ್ರೀಡೆಯಲ್ಲಿ ಚಾಂಪಿಯನ್:

ವಿದ್ಯಾ ಹೈಸ್ಕೂಲು ಹಾಗೂ ಕಾಲೇಜು ದಿನಗಳಲ್ಲಿ ಶಿಕ್ಷಣದೊಂದಿಗೆ ಕ್ರೀಡೆಯಲ್ಲಿಯೂ ಉತ್ತಮ ಸಾಧನೆ ಮಾಡಿದ್ದರು. ಕ್ರೀಡೆಯ ವಿವಿಧ ವಿಭಾಗಗಳಲ್ಲಿ ಚಾಂಪಿಯನ್ ಆಗಿಯೂ ಗುರುತಿಸಿಕೊಂಡಿದ್ದರು. ನೆಟ್ ಬಾಲ್‍ನಲ್ಲಿ ಐದು ಬಾರಿ ರಾಜ್ಯ ಮಟ್ಟ, ಒಂದು ಭಾರಿ ರಾಷ್ಟ್ರಮಟ್ಟವನ್ನೂ ಪ್ರತಿನಿಧಿಸಿದ್ದರು. ಅಥ್ಲೆಟಿಕ್ಸ್ ನಲ್ಲಿ ಆರು ಭಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ್ದು ಪೋಲ್ ವಾಲ್ಟ್ ನಲ್ಲಿ ಕಂಚಿನ ಪದಕವನ್ನೂ ಪಡೆದಿದ್ದರು. ಮಂಗಳೂರು ವಿವಿ, ಜಿಲ್ಲಾ, ತಾಲೂಕು ಪಟ್ಟದಲ್ಲಿ ಹಲವು ಭಾರಿ ಪ್ರಥಮ, ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು.  ಇದೀಗ ವಿದ್ಯಾ ಸೇನೆ ಸೇರುತ್ತಿರುವ ಬಗ್ಗೆ ಅವರ ಕುಟುಂಬಸ್ಥರು ಹಾಗೂ ಗ್ರಾಮದವರು ಸಂತಸ ವ್ಯಕ್ತಪಡಿಸಿದ್ದಾರೆ.

“ಮಗಳು ಭಾರತೀಯ ಸೇನೆಗೆ ಸೇರುತ್ತಿರುವ ಬಗ್ಗೆ ಹೆಮ್ಮೆ ಇದೆ. ಅವಳು ವಿದ್ಯಾವಂತಳಾಗಿ ಒಳ್ಳೆಯ ಕೆಲಸಕ್ಕೆ ಸೇರಬೇಕೆನ್ನುವುದು ನನ್ನ ಆಸೆಯಾಗಿತ್ತು. ಅದು ದೇಶ ಸೇವೆಯ ಮೂಲಕ ನೆರವೇರುತ್ತದೆ ಎಂದು ಅಂದುಕೊಂಡಿರಲಿಲ್ಲ. ಮಗಳ ಬಗ್ಗೆ ಹೆಮ್ಮೆ ಅನ್ನಿಸುತ್ತಿದೆ” ಎಂದು ಆಕೆಯ ತಂದೆ ರಮೇಶ್ ಗೌಡ ಹೇಳುತ್ತಾರೆ.

 “ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ಹೆಮ್ಮೆ ಇದೆ. ನನಗೆ ದೇಶ ಸೇವೆ ಮಾಡಲು ಇದೊಂದು ಉತ್ತಮ ಅವಕಾಶ. ಸೇನೆ ಸೇರ್ಪಡೆಯ ಕುರಿತು ನೇಮಕಾತಿ ಪತ್ರ ಕೈ ಸೇರಿದಾಗ ಖುಷಿಯಾಯಿತು” ಎಂದು ವಿದ್ಯಾ ಗೌಡ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ

ಶೋಷಿತ, ದಮನಿತ ಸಮುದಾಯಗಳ ಧ್ವನಿಯಾಗಿರುವ ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಮಿಡಿಯುವ ಪ್ರಸ್ತುತ ಪಾಕ್ಷಿಕಕ್ಕೆ ಚಂದಾದಾರಾಗಿರಿ. ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!