ಉಡುಪಿ : ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯತ್ ಕಚೇರಿ ಮೇಲೆ ದಾಳಿ ಮಾಡಿರುವ ಉಡುಪಿ ಜಿಲ್ಲಾ ಲೋಕಾಯುಕ್ತ ತಂಡ ಜಮೀನು ವಿಚಾರದಲ್ಲಿ ವ್ಯಕ್ತಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಪಿಡಿಒ ಉಮಾ ಶಂಕರ್, ಎಸ್ ಡಿ ಎ ಶೇಖರ್ ಅವರನ್ನು ರೆಡ್ ಹ್ಯಾಂಡಾಗಿ ಬಲೆಗೆ ಕೆಡವಿದೆ.
ಗಂಗೊಳ್ಳಿಯ ಸುಲ್ತಾನ್ ಮೊಹಲ್ಲಾದ ಹನೀಫ್ ಎಂಬವರ ಜಮೀನಿಗೆ 9/11 ದಾಖಲೆ ಮಾಡಿಕೊಡಲು ಪಿಡಿಒ ಉಮಾ ಶಂಕರ್ ಅವರು 25,000 ರೂಪಾಯಿ ಲಂಚ ಕೇಳಿದ್ದರು ಎನ್ನಲಾಗುತ್ತಿದೆ. ಇದರಿಂದ ಬೇಸತ್ತಿದ್ದ ಹನೀಫ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು ಎಂದು ತಿಳಿದುಬಂದಿದೆ.
ಇಂದು ಮಧ್ಯಾಹ್ನ ಗಂಗೊಳ್ಳಿಗೆ ಗ್ರಾಮ ಪಂಚಾಯತ್ ಗೆ ತೆರಳಿದ್ದ ದೂರದಾರ ಹನೀಫ್ 22 ಸಾವಿರ ರೂಪಾಯಿ ಲಂಚದ ಹಣವನ್ನು ಪಿಡಿಒ ಅವರಿಗೆ ನೀಡಿದ್ದರು. ಈ ವೇಳೆ ದಾಳಿ ಮಾಡಿದ ಲೋಕಾಯುಕ್ತ ತಂಡ ಲಂಚ ಸ್ವೀಕರಿಸುತ್ತಿದ್ದಾಗಲೇ ಪಿಡಿಓ ಉಮಾ ಶಂಕರ್, ಎಸ್’ಡಿಎ ಶೇಖರ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಪ್ರಕರಣದ ವಿವರ: ಮೊಹಮ್ಮದ್ ಹನೀಫ್ ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ಸರ್ವೇ ನಂಬರ್ 108/13 ರಲ್ಲಿ 8.25 ಸೆಂಟ್ಸ್ ಜಾಗ ವನ್ನು 9&11 ಮಾಡುವ ಉದ್ದೇಶದಿಂದ ನವೆಂಬರ್ 2024 ರಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಗೆ ದಾಖಲೆಗಳೊಂದಿಗೆ ಅರ್ಜಿ ನೀಡಿದ್ದರು. ಈ ಬಗ್ಗೆ ಪಿಡಿಓ ಉಮಾಶಂಕರ್ ಹಾಗೂ ಎಸ್ ಡಿ ಎ ಶೇಖರ್ ಅವರು ಇವರೆಗೂ ಕೆಲಸ ಮಾಡಿ ಕೊಡದೆ ಸತಾಯಿಸಿ 25,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊಹಮ್ಮದ್ ಹನೀಫ್ ಅವರಿಗೆ ಲಂಚದ ಹಣ ನೀಡಲು ಇಚ್ಛೆ ಇಲ್ಲದ ಕಾರಣ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದಿನಾಂಕ 22/01/2025 ರಂದು ದೂರು ನೀಡಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ನಟರಾಜ್ ಎಂ ಎ ಮಾನ್ಯ ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ಮಂಗಳೂರು ರವರ ಮಾರ್ಗದರ್ಶನದಲ್ಲಿ ಮಂಜುನಾಥ, ಪ್ರಭಾರ ಪೊಲೀಸ್ ಉಪಾಧೀಕ್ಷಕರು, ಕ.ಲೋ ಉಡುಪಿ, ಅಮಾನುಲ್ಲ. ಎ ಪೊಲೀಸ್ ನಿರೀಕ್ಷಕರು ಕ. ಲೋ ಮಂಗಳೂರು, ಶ್ರೀ ಚಂದ್ರ ಶೇಖರ್ ಕೆ. ಎನ್,ಪೊಲೀಸ್ ನಿರೀಕ್ಷಕರು ಕ. ಲೋ ಮಂಗಳೂರುರವರ ನೇತೃತ್ವದಲ್ಲಿ ಉಡುಪಿ ಲೋಕಾಯುಕ್ತ ಠಾಣೆ ಸಿಬ್ಬಂದಿಯವರಾದ ನಾಗೇಶ್ ಉಡುಪ, ನಾಗರಾಜ್ ಮಲ್ಲಿಕಾ,ರೋಹಿತ್,ಪುಷ್ಪಾವತಿ, ಸತೀಶ್ ಹಂದಾಡಿ,ಅಬ್ದುಲ್ ಜಲಾಲ್,ರವೀಂದ್ರ,ರಮೇಶ್ ಪ್ರಸನ್ನ ದೇವಾಡಿಗ,ಸತೀಶ್ ಆಚಾರ್,ಸೂರಜ್ ,ರಾಘವೇಂದ್ರ ಹೊಸಕೋಟೆ,ಸುಧೀರ್ ಹಾಗೂ ಮಂಗಳೂರು ಲೋಕಾಯುಕ್ತ ಠಾಣಾ ಸಿಬ್ಬಂದಿಯವರಾದ ರಾಧಾಕೃಷ್ಣ, ಮಹೇಶ್, ವಿನಾಯಕ, ವೈಶಾಲಿ, ಶರತ್ ಸಿಂಗ್,ಗಂಗಣ್ಣ, ಪಂಪಣ್ಣ ನೇತೃತ್ವದಲ್ಲಿ ಇಂದು ಹನೀಫ್ ಅವರು ಗಂಗೊಳ್ಳಿ ಪಂಚಾಯತ್ ಕಛೇರಿ ಯಲ್ಲಿ ಆಪಾದಿತ ಸರಕಾರಿ ಅಧಿಕಾರಿಗಳಿಗೆ ಲಂಚದ ಹಣ ನೀಡುವಾಗ ರೆಡ್ ಹ್ಯಾಂಡ್ ಆಗಿ ದಾಳಿ ಮಾಡಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.