ಟ್ವೀಟ್ ಮೂಲಕ ಜಿಲ್ಲಾಡಳಿತವನ್ನು ಕುಟುಕಿದ ಕುನಾಲ್ ಕಮ್ರಾ
ಗುರ್ಗಾಂವ್/ ಹರ್ಯಾಣ: ಈ ತಿಂಗಳ ಅಂತ್ಯದಲ್ಲಿ ಗುರ್ಗಾಂವ್ನಲ್ಲಿ ನಿಗದಿಯಾಗಿದ್ದ ಹಾಸ್ಯಗಾರ ಕುನಾಲ್ ಕಮ್ರಾ ಅವರ ಕಾರ್ಯಕ್ರಮವನ್ನು ವಿಎಚ್ಪಿ ಮತ್ತು ಬಜರಂಗದಳದ ಎಚ್ಚರಿಕೆಯ ಹಿನ್ನೆಲೆಯಲ್ಲಿ ಆಯೋಜಕರು ರದ್ದುಗೊಳಿಸಿದ್ದಾರೆ.
ಸೆಪ್ಟಂಬರ್ 17 ಮತ್ತು 18ರಂದು ಸ್ಟುಡಿಯೋ ಝೋ ಬಾರ್ನಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮದ ವಿರುದ್ಧ ವಿಎಚ್ಪಿ ಮತ್ತು ಬಜರಂಗದಳ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೇ ಈ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗೆ ಪತ್ರವನ್ನೂ ಬರೆದಿದ್ದಾರೆ.
ಕಾರ್ಯಕ್ರಮದ ಕುರಿತು ಜಿಲ್ಲಾಡಳಿತ ಈವರೆಗೂ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಆದರೆ ಈ ನಡುವೆ ಸ್ಥಳೀಯ ಪತ್ರಕರ್ತರೊಂದಿಗೆ ಮಾತನಾಡಿದ ಸ್ಟುಡಿಯೋ ಝೋ ಬಾರ್ನ ಜನರಲ್ ಮ್ಯಾನೇಜರ್ ಸಾಹಿಲ್ ದಾವ್ರಾ, “ಭಜರಂಗದಳದ ಇಬ್ಬರು ವ್ಯಕ್ತಿಗಳು ಬಂದು ಪ್ರದರ್ಶನಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದರು. ಯಾವುದೇ ಸಮಸ್ಯೆ ಸೃಷ್ಟಿಯಾಗುವುದು ಬೇಡವೆಂದು ನಾವು ಕಾರ್ಯಕ್ರಮ ರದ್ದುಗೊಳಿಸಲು ನಿರ್ಧರಿಸಿದ್ದೇವೆ” ಎಂದು ಹೇಳಿದ್ದಾರೆ.
ಅಲ್ಲದೇ ಕಾರ್ಯಕ್ರಮದ ಪ್ರಚಾರಾರ್ಥವಾಗಿ ಇನ್ಸ್ಟಗ್ರಾಂನಲ್ಲಿ ಹಾಕಲಾಗಿದ್ದ ಪೋಸ್ಟ್ನ್ನೂ ಆಯೋಜಕರು ಡಿಲೀಟ್ ಮಾಡಿದ್ದಾರೆ.
ಆದರೆ ಕಾರ್ಯಕ್ರಮ ರದ್ದುಪಡಿಸಿರುವುದರ ಬಗ್ಗೆ ಕುನಾಲ್ ಕಾಮ್ರಾ ಟ್ವೀಟ್ ಮಾಡಿದ್ದು, “ನಮ್ಮ ಸಂಸ್ಕೃತಿ ಮತ್ತು ನಮ್ಮ ದೇವತೆಗಳನ್ನು ಅಪಹಾಸ್ಯ ಮಾಡಲಾಗಿದೆಯೆಂದು ಆರೋಪಿಸಲಾಗುತ್ತಿದೆ. ಅಲ್ಲದೇ ಕಾರ್ಯಕ್ರಮ ಶಾಂತಿಯನ್ನು ಕದಡಿರುವುದಕ್ಕೂ ಸೂಕ್ತ ಪುರಾವೆಗಳಿಲ್ಲ. 12 ಜನರಿಗೆ ಈ ಕಾರ್ಯಕ್ರಮ ನಡೆಯುವುದು ಬೇಕಾಗಿಲ್ಲ. ಆದರೆ 500 ಮಂದಿ ಕಾರ್ಯಕ್ರಮ ವೀಕ್ಷಿಸಲೆಂದು ಟಿಕೆಟ್ ಪಡೆದಿದ್ದಾರೆ. ಆದರೆ ಅಧಿಕಾರಿಗಳು ಏನು ನಿರ್ಧರಿಸಬೇಕು (ಯುಪಿಎಸ್ಸಿ ಪ್ರಶ್ನೆ 10 ಅಂಕ)” ಎಂದು ಜಿಲ್ಲಾಡಳಿತವನ್ನು ಕುಟುಕಿದ್ದಾರೆ.