ನವದೆಹಲಿ: ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಗಾರಿದ್ದಾರೆ.
ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಂಡ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇಂಥ ವಿಶ್ವಾಸದ ಕೊರತೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ. ಇದರಿಂದ ನಾಡಿಗೆ ಸಂಕಷ್ಟ ಬರಲಿದೆ. ರಾಜ್ಯಕ್ಕೆ ಒಳ್ಳೆಯದು ಮಾಡುವ ನೈಜ ಉದ್ದೇಶ ಇದ್ದಿದ್ದರೆ ಮುಖ್ಯಮಂತ್ರಿಗಳು ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದರು ಎಂದು ಹೇಳಿದ್ದಾರೆ.
ಇಂತಹ ವಿಶ್ವಾಸ ಕೊರತೆಗೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎನ್ನುವುದರಲ್ಲಿ ಸಂಶಯ ಇಲ್ಲ ಇಂದ ಸಚಿವರು, ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಆಯೋಗದ ಸಭೆಯನ್ನು ಕರೆದು ‘ವಿಕಸಿತ ಭಾರತʼದ ಗುರಿ ಸಾಧಿಸುವ ಬಗ್ಗೆ ಚರ್ಚಿಸಿದರು. ಅದಕ್ಕಾಗಿ ತಮ್ಮ ಮುನ್ನೋಟವನ್ನು ಸಭೆಯಲ್ಲಿ ಪ್ರಸುತ್ತಪಡಿಸಿದರು. ಕರ್ನಾಟಕವೂ ಸೇರಿ ಎಲ್ಲಾ ರಾಜ್ಯಗಳು ಭಾಗವಹಿಸಬೇಕಿತ್ತು ಎನ್ನುವುದು ನನ್ನ ಅಭಿಪ್ರಾಯ ಎಂದು ಕುಮಾರಸ್ವಾಮಿ ಹೇಳಿದರು.
ಸಭೆಗೆ ಬರದೆ ಏನು ಸಾಧನೆ ಮಾಡ್ತಾರೆ: ಸಭೆಗೆ ಎನ್ಡಿಎ ಒಕ್ಕೂಟದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಬಂದಿದ್ದರು. ನಿತೀಶ್ ಕುಮಾರ್ ಅವರು ಆರೋಗ್ಯದ ಸಮಸ್ಯೆಯಿಂದ ಬಂದಿರಲಿಲ್ಲ. ತಮಿಳುನಾಡು, ತೆಲಂಗಾಣ, ಕೇರಳ, ಕರ್ನಾಟಕ, ದೆಹಲಿ, ಹಿಮಾಚಲ ಪ್ರದೇಶ, ಜಾರ್ಖಂಡ್ ರಾಜ್ಯಗಳ ಮುಖ್ಯಮಂತ್ರಿಗಳು ಗೈರಾಗಿದ್ದರು. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಅಭಿವೃದ್ಧಿ ಮತ್ತು ಆ ರಾಜ್ಯಗಳ ಜನರ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದ ಅವರು ಏನು ಸಾಧನೆ ಮಾಡುತ್ತಾರೆ. ಅನ್ಯಾಯ ಆಗಿದ್ದರೆ ಸಭೆಯಲ್ಲಿ ಬಂದು ಚರ್ಚಿಸಬೇಕಾಗಿತ್ತು. ಬೀದಿಯಲ್ಲಿ ನಿಂತು ಮಾತನಾಡಿದರೆ ಏನು ಸಿಗುತ್ತದೆ? ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸರ್ಕಾರ ಕೇಂದ್ರದೊಂದಿಗೆ ನಿರಂತರವಾಗಿ ಒಂದಲ್ಲ ಒಂದು ಕಾರಣಕ್ಕೆ ಸಂಘರ್ಷ ಮಾಡಿಕೊಳ್ಳುತ್ತಿದೆ. ರಾಜ್ಯ ಸರ್ಕಾರದ ವಿಶ್ವಾಸದ ಕೊರತೆಯಿಂದ ಕೂಡಿದೆ. ಒಕ್ಕೂಟ ವ್ಯವಸ್ಥೆಗೆ ಇದು ಒಳ್ಳೆದಲ್ಲ. ಇದರಿಂದ ನಾಡಿಗೆ ಸಂಕಷ್ಟ ಬರಲಿದೆ. ಇದಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಕಾರಣ ಎಂದು ದೂರಿದರು.
‘ಇಂಡಿಯಾ’ ಪರ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮಾತ್ರ ಸಭೆಗೆ ಹೋಗಿದ್ದು, ಮಾತಿನ ಮಾಧ್ಯೆ ಮೈಕ್ ಆಫ್ ಮಾಡಿ ಅವಮಾನಿಸಲಾಗಿದೆ ಎಂದು ಸಭಾತ್ಯಾಗ ಮಾಡಿದ್ದಾರೆ. ಇದು ಅವಮಾನ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ