ರಾಮನಗರ: ಕರ್ನಾಟಕದ ಉತ್ತರ ಭಾಗದಲ್ಲಿ ಶ್ರೀರಾಮ ಸೇನೆ ಸೇರಿದಂತೆ ಹಲವು ಸಂಘಟನೆಗಳು ವೇದಿಕೆ ನಿರ್ಮಿಸಿ ತಲವಾರು ಸಹಿತ ಮಾರಕಾಯುಧಗಳನ್ನು ಹಂಚುತ್ತಿವೆ. ಲವ್ ಕೇಸರಿ ಅಭಿಯಾನಗಳನ್ನು ಹಮ್ಮಿಕೊಳ್ಳುವುದಾಗಿ ಬಹಿರಂಗ ಹೇಳಿಕೆ ನೀಡುತ್ತಿರುವುದು ಆಘಾತಕಾರಿ. ಇಂತಹ ಸಂಘಟನೆಗಳನ್ನು ಸರ್ಕಾರ ಪ್ರೋತ್ಸಾಹಿಸದೇ ತಕ್ಷಣ ನಿಷೇಧಿಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.
ರಾಮನಗರದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕೋಮು ಹಿಂಸಾಚಾರಕ್ಕೆ ಪ್ರಯತ್ನಿಸುತ್ತಿರುವ ಸಂಘಟನೆಗಳನ್ನು ಸರ್ಕಾರ ಪ್ರೋತ್ಸಾಹಿಸುತ್ತದೇಯೋ ಅಥವಾ ನಿಷೇಧಿಸುತ್ತದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ, ಇಲ್ಲಿ ಮತ್ತೊಂದು ಗೋಧ್ರಾ ಹತ್ಯಾಕಾಂಡ ನಡೆಯಲು ಅನುಮತಿಸುವುದಿಲ್ಲ. ಸರ್ಕಾರ ಇಂತಹ ಸಂಘಟನೆಗಳ ಮೇಲೆ ಕ್ರಮ ಜರುಗಿಸದೇ ಹೋದಲ್ಲಿ ಬಿಜೆಪಿ ದಕ್ಷಿಣ ಭಾರತದಲ್ಲಿ ನೆಲೆ ಕಳೆದುಕೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಕಲ್ಲಂಗಡಿ ಒಡೆದವರ ಮೇಲೆ ಮಾತ್ರವಲ್ಲ ತಲೆ ಒಡೆದವರ ಮೇಲೆಯೂ ಕನಿಕರ ಬರಲಿ ಎಂಬ ಸಿ.ಟಿ. ರವಿ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಇಂತಹ ಹೊಣೆಗೇಡಿ ಹೇಳಿಕೆ ನೀಡಲು ಅವರಿಗೆ ನಾಚಿಕೆಯಾಗಬೇಕು. ನುಗ್ಗಿಕೇರಿ ಘಟನೆಯಲ್ಲಿ ಪ್ರಾಣ ಕಳೆದು ಕೊಂಡಿದ್ದರೆ ಯಾರು ಹೊಣೆ? ಕಳೆದ ಜನವರಿ – ಫೆಬ್ರವರಿ ಸಾಲಿನಲ್ಲಿ ರಾಜ್ಯದಲ್ಲಿ ಸುಮಾರು 250 ಕ್ಕೂ ಮಿಕ್ಕಿದ ಕೊಲೆಗಳು ನಡೆದಿದೆ. ಮೊದಲು ಅದರ ಬಗ್ಗೆ ಮಾತನಾಡಿ ಎಂದು ಸಿ.ಟಿ. ರವಿ ಅವರಿಗೆ ಚಾಟಿ ಬೀಸಿದ್ದಾರೆ.