►ಪೊಲೀಸರಿಗೆ ಬರೆದುಕೊಟ್ಟ ಮುಚ್ಚಳಿಕೆ ಮಾಧ್ಯಮಗಳ ಮುಂದೆ ಓದಿದ ಮಾಜಿ ಮುಖ್ಯಮಂತ್ರಿ
ಸೇಡಂ/ಕಲಬುರಗಿ: ಕೆಲ ದಿನಗಳಿಂದ ಸುದ್ದಿಯಲ್ಲಿರುವ ಸ್ಯಾಂಟ್ರೊ ರವಿ ಬಿಜೆಪಿ ಸಕ್ರಿಯ ಕಾರ್ಯಕರ್ತ ಎಂದು ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದಾನೆ. ನೈತಿಕತೆ ಬಗ್ಗೆ ಯಾವ ಮುಖ ಇಟ್ಟುಕೊಂಡು ಜನರಿಗೆ ಬೋಧನೆ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇಡಂ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪೊಲೀಸ್ ಪ್ರಕರಣ ಒಂದರಲ್ಲಿ ಸ್ಯಾಂಟ್ರೊ ರವಿ ವಿರುದ್ಧ ಜಗದೀಶ್ ಎಂಬುವವರು ಬೆಂಗಳೂರು ನಗರದ ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯಲ್ಲಿ ವರ್ಗಾವಣೆ ವಂಚನೆ ವಿಷಯಕ್ಕೆ ದೂರು ದಾಖಲಿಸಿದರು. ಅದಕ್ಕೆ ಪ್ರತಿಯಾಗಿ ಮುಚ್ಚಳಿಕೆ ಬರೆದುಕೊಟ್ಟಿರುವ ಸ್ಯಾಂಟ್ರೊ ರವಿ, ತಾನು ಬಿಜೆಪಿ ಸಕ್ರಿಯ ಕಾರ್ಯಕರ್ತ. ನನಗೆ ಆ ಪಕ್ಷದ ಎಲ್ಲ ನಾಯಕರು ಗೊತ್ತು. ಅನೇಕ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿಸಿದ್ದೇನೆ ಎಂದು ತಿಳಿಸಿದ್ದಾನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಇದೇ ವೇಳೆ ಅವರು ಸ್ಯಾಂಟ್ರೊ ರವಿ ಪೊಲೀಸರಿಗೆ ಬರೆದುಕೊಟ್ಟರುವ ಮುಚ್ಚಳಿಕೆಯನ್ನು ಪೊಲೀಸರ ಮುಂದೆ ಓದಿದರು.
ಇದು ಏನನ್ನು ಸೂಚಿಸುತ್ತದೆ, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈ ಬಗ್ಗೆ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಗೆ ಹಾಜರಾದ ಈತ ಇಂತಹ ಮುಚ್ಚಳಿಕೆ ಬರೆದುಕೊಟ್ಟಿರುವುದಲ್ಲಿ 3-4 ವರ್ಷದಿಂದ ಬಿಜೆಪಿ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ನಮ್ಮ ಪಕ್ಷದ ಶಾಸಕರು, ಸಚಿವರ ಜೊತೆ ನನಗೆ ಒಡನಾಟ ಇದೆ. ಹಾಗಾಗಿ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದೇನೆ. ಪೊಲೀಸರ ಮುಂದೆ ಹೇಳಿಕೆ ಕೊಟ್ಟಿದ್ದಾನೆ. ಅಷ್ಟೇ ಅಲ್ಲ ಆ ಮುಚ್ಚಳಿಕೆಯಲ್ಲಿ ವರ್ಗಾವಣೆ ಮಾಡಿಸಿದ ಅಧಿಕಾರಿಗಳ ಪಟ್ಟಿ ಬರೆದಿದ್ದಾನೆ. ಇವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಇವರು ಪವಿತ್ರ ಕೇಸರಿ ಬಟ್ಟೆ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಸ್ಯಾಂಟ್ರೋ ರವಿ, ಸೈಲೆಂಟ್ ಸುನಿಲ್, ಫೈಟರ್ ರವಿ, ಅಂಥವರ ಹೆಗಲ ಮೇಲೆ ಕೇಸರಿ ಹಾಕಿದ್ದಾರೆ.
ಪವಿತ್ರ ಕೇಸರಿ ಬಟ್ಟೆ ಹಾಕಿ ಅದರ ಪಾವಿತ್ರ್ಯತೆಯನ್ನು ಬಿಜೆಪಿ ಅವರು ಹಾಳುಮಾಡಿದ್ದಾರೆ. ಇವರು ದೇಶಕ್ಕೆ ಉಪದೇಶ ಮಾಡುತ್ತಾರೆ ನಾಚಿಕೆಯಾಗಬೇಕು ಎಂದರು ಅವರು.