ರಾಮಮಂದಿರಕ್ಕೆ ಹಣ ನೀಡದವರ ಮನೆಗಳಿಗೆ ಗುರುತು | ಹಿಟ್ಲರ್ ಕೂಡ ಇದನ್ನೇ ಮಾಡಿದ್ದ : ಕುಮಾರಸ್ವಾಮಿ

Prasthutha|

ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹ ನಡೆಯುತ್ತಿದ್ದು, ಹಣ ಕೊಡದವರ ಮನೆಗಳಿಗೆ ಗುರುತು ಹಾಕಲಾಗುತ್ತಿದೆ. ಲಕ್ಷಾಂತರ ಮಂದಿಯನ್ನು ಹತ್ಯೆ ಮಾಡಿದ ಹಿಟ್ಲರ್ ಕಾಲದಲ್ಲಿಯೂ ಇದೇ ರೀತಿ ಮನೆಗಳನ್ನು ಗುರುತಿಸಲಾಗಿತ್ತು. ಇದು ಮುಂದುವರಿದರೆ ದೇಶ ಎಲ್ಲಿಗೆ ತಲುಪಬಹುದು ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -

ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಟ್ಲರ್ ಕಾಲದಲ್ಲಿ ನಾಜಿಗಳಿಗೂ ಜ್ಯೂ ಗಳಿಗೆ ಸಂಘರ್ಷವೇರ್ಪಟ್ಟಿತ್ತು. ಆಗ ಕೂಡ ಇದೇ ಮಾದರಿಯಲ್ಲಿ ಮನೆಗಳನ್ನು ಗುರುತಿಸುವ ಕೆಲಸ ನಡೆದಿತ್ತು. ಯಾಕಾಗಿ ನಿರ್ದಿಷ್ಟ ಮನೆಗಳನ್ನು ಗುರುತಿಸಲಾಗುತ್ತಿದೆ?. ಮಂದಿರ ನಿರ್ಮಾಣಕ್ಕೆ ಹಣ ನೀಡದವರ ಮನೆಗಳಿಗೆ ಗುರುತು ಹಾಕುವುದು ನಡೆಯುತ್ತಿದೆ. ಜರ್ಮನಿಯಲ್ಲಿ ನಾಜಿ ಹುಟ್ಟಿದ ಸಂದರ್ಭದಲ್ಲೇ ಭಾರತದಲ್ಲಿ ಆರ್ ಎಸ್ ಎಸ್ ಹುಟ್ಟಿದೆ.  ನಾಜಿ ನೀತಿಯನ್ನೇ ಆರ್ ಎಸ್ ಎಸ್ ಮುಂದುವರಿಸಿದರೆ ದೇಶ ಏನಾಗಬಹುದು ಎಂಬ ಆತಂಕ ಕಾಡುತ್ತಿದೆ ಎಂದರು.

ದೇಶದಲ್ಲಿ ಮಾತನಾಡುವ ಮೂಲಭೂತ ಹಕ್ಕನ್ನೇ ಕಸಿಯಲಾಗುತ್ತಿದೆ. ಮುಕ್ತವಾಗಿ ಯಾರಿಗೂ ಅವರ ಭಾವನೆ ವ್ಯಕ್ತಪಡಿಸಲು ಸಾಧ್ಯವಾಗುತ್ತಿಲ್ಲ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ. ಸರ್ಕಾರದ ತಪ್ಪು ಎತ್ತಿ ಹೇಳಿದರೆ ಮಾಧ್ಯಮದವರ ವಿರುದ್ಧವೂ ಕ್ರಮಕೈಗೊಳ್ಳಲಾಗುತ್ತಿದೆ. ಇಂತಹ ಪರಿಸ್ಥಿತಿ ಮುಂದುವರಿದರೆ ದೇಶದಲ್ಲಿ ಏನು ಬೇಕಾದರೂ ಆಗಬಹುದು ಎಂದು ಕುಮಾರಸ್ವಾಮಿ ಹೇಳಿದರು.

- Advertisement -

ಬಿಪಿಎಲ್ ಮಾನದಂಡಗಳನ್ನು ಬದಲಾಯಿಸಲು ಮುಂದಾದ ಸರ್ಕಾರದ ವಿರುದ್ಧ ಹರಿಹಾಯ್ದ ಅವರು, ಆಹಾರ ಸಚಿವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ. ಸಕ್ಕರೆ ಕಾರ್ಖಾನೆಯಲ್ಲಿ ಬಡವರಿಗೆ ಟೋಪಿ ಹಾಕಿದ ಸಚಿವರಿಗೆ ಬಡವರ ಕಷ್ಟ ಹೇಗೆ ಗೊತ್ತಾಗಬೇಕು ? ಎಂದು ಸಚಿವ ಉಮೇಶ್ ಕತ್ತಿ ಹೆಸರು ಹೇಳದೆ ಟೀಕಿಸಿದರು.

ನ್ಯಾಯಾಧೀಶರು ಕೂಡ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ದೇಶದ ವ್ಯವಸ್ಥೆಗಳು ಕಾರ್ಪೋರೇಟ್ ಕಂಪನಿಗಳಿಗೆ ಮಾತ್ರ ಅನುಕೂಲವಾಗುತ್ತಿವೆ. ಬಡವರಿಗೆ ಯಾವುದೇ ಅನುಕೂಲವಾಗುತ್ತಿಲ್ಲ ಎಂದು ಸುಪ್ರೀಂಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿಗಳೇ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.



Join Whatsapp